

ಬೆಂಗಳೂರು: ಅನುಮತಿ ಪಡೆಯದೆ ಎಂಆರ್‌ಟಿ ಮ್ಯೂಸಿಕ್ ಕಂಪನಿಯ ಎರಡು ಹಾಡುಗಳನ್ನು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಬಳಸಿ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರನ್ನು ಯಶವಂತಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ಶುಕ್ರವಾರ ರಕ್ಷಿತ್ ಶೆಟ್ಟಿ ತನಿಖಾಧಿಕಾರಿ ಎದುರು ಹಾಜರಾಗಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ತನಿಖಾಧಿಕಾರಿ, ರಕ್ಷಿತ್ ಶೆಟ್ಟಿ ಅವರ ಹೇಳಿಕೆ ದಾಖಲಿಸಿದ್ದಾರೆ. ಮುಂದಿನ ತನಿಖೆ ವೇಳೆ ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಯಶವಂತಪುರ ಠಾಣೆ ಪೊಲೀಸರು ರಕ್ಷಿತ್ ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಎರಡನೇ ಬಾರಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣದ ದಾಖಲಾದ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಬಂಧನದ ಭೀತಿಯಿಂದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಕೇಸ್ ಹಾಕುವುದೇ ಅವರ ಕೆಲಸ:
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಕಳೆದ ಜನವರಿಯಲ್ಲಿ ನಮ್ಮ ನಿರ್ಮಾಣ ಸಂಸ್ಥೆಯ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆ ಮಾಡಿದ್ದೆವು. ಈ ಸಿನಿಮಾದಲ್ಲಿ ಕನ್ನಡದ ಮೂರ್ನಾಲ್ಕು ಹಾಡುಗಳನ್ನು ಸಿನಿಮಾದ ಹಿನ್ನೆಲೆಯಲ್ಲಿ ಬಳಕೆ ಮಾಡಲಾಗಿತ್ತು. ಎರಡು ಹಾಡುಗಳ ಬಳಕೆ ಸಂಬಂಧ ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ರಾಜೇಶ್ ಅವರು ಮ್ಯೂಸಿಕ್ ಕಂಪನಿಗೆ ಕರೆ ಮಾಡಿ ಅನುಮತಿ ಕೇಳಿದ್ದರು. ಆಗ ಮ್ಯೂಸಿಕ್ ಕಂಪನಿಯವರು ದೊಡ್ಡ ಮೊತ್ತ ಕೇಳಿದ್ದರು. ಬಳಿಕ ಮಾತುಕತೆ ಅಷ್ಟಕ್ಕೆ ಮುಗಿದಿತ್ತು ಎಂದು ಹೇಳಿದರು.
ವಾಸ್ತವದಲ್ಲಿ ಈ ಹಾಡುಗಳ ಬಳಕೆ ಕಾಪಿ ರೈಟ್ಸ್ ಉಲ್ಲಂಘನೆ ಅಡಿ ಬರುವುದಿಲ್ಲ. ಸಿನಿಮಾದ ಹಿನ್ನೆಲೆಯಲ್ಲಿ ಒಂದು ಹಾಡನ್ನು ಆರು ಸೆಕೆಂಡ್ ಮತ್ತು ಮತ್ತೊಂದು ಹಾಡನ್ನು ಕೆಲವೇ ಸೆಕೆಂಡ್ ಬಳಸಿದ್ದೇವೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳ ಬಳಿಕ ಈ ಮ್ಯೂಸಿಕ್ ಕಂಪನಿಯವರು ದೂರು ನೀಡಿದ್ದಾರೆ. ಕೆಲವು ಮ್ಯೂಸಿಕ್ ಕಂಪನಿಗಳು ಕೇಸ್ ಹಾಕುವುದನ್ನೇ ಕೆಲಸ ಮಾಡಿಕೊಂಡಿವೆ. ಈ ಕಾಪಿ ರೈಟ್ಸ್ ಬಗ್ಗೆ ಚಿತ್ರೋದ್ಯಮಕ್ಕೆ ಗೊಂದಲವಿದೆ. ಈ ಬಗ್ಗೆ ಯಾರಿಗೂ ಹೆಚ್ಚಿನ ಜ್ಞಾನವಿಲ್ಲ. ಇದನ್ನೇ ಕೆಲವು ಮ್ಯೂಸಿಕ್ ಕಂಪನಿಗಳು ಅಡ್ವಾನ್‌ಟೇಜ್ ತೆಗೆದುಕೊಂಡು ಕೇಸ್ ಹಾಕುತ್ತಿವೆ. ಈ ಪ್ರಕರಣವನ್ನು ನಾವು ನ್ಯಾಯಾಲಯದಲ್ಲಿಯೇ ಹೋರಾಟ ಮಾಡುತ್ತೇವೆ. ನಮಗೂ ಈ ಕಾಪಿ ರೈಟ್ಸ್ ಬಗ್ಗೆ ಗೊತ್ತಾಗಲಿ ಎಂದರು.
ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಇದೇ ಮ್ಯೂಸಿಕ್ ಸಂಸ್ಥೆ ಕೇಸ್ ಹಾಕಿತ್ತು. ಇದನ್ನು ನಾವು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಗೆದ್ದಿದ್ದೆವು. ಬಳಿಕ ಸಂಧಾನ ಮಾಡಿಕೊಂಡಿದ್ದೆವು. ಈ ಪ್ರಕರಣದಲ್ಲಿ ಯಾವುದೇ ಸಂಧಾನ ಮಾಡುವುದಿಲ್ಲ. ಏನೇ ಇದ್ದರೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.