ಡೆಡ್ಲಿ ಡಾಕ್ಟರ್ ರಜಿನಿಕಾಂತ್ : ತಲೈವಾ ನಟನೆಯ 173ನೇ ಚಿತ್ರಕ್ಕೆ ‘ಧರ್ಮನ್’ ಟೈಟಲ್ ಫಿಕ್ಸ್

ಧರ್ಮನ್ ಚಿತ್ರದ ಪೋಸ್ಟರ್​
ಧರ್ಮನ್ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ರಜಿನಿಕಾಂತ್ ಅಭಿನಯದ 173ನೇ ಸಿನಿಮಾಕ್ಕೆ ಮಹೂರ್ತ
  • ತಕೈವಾ ಸಿನಿಮಾಕ್ಕೆ ಕಮಲ್​ ಹಾಸನ್ ಬಂಡವಾಳ
  • ಗುರುವಾರದಿಂದಲೇ ಶೂಟಿಂಗ್ ಆರಂಭಿಸಿದ ತಂಡ
‘ಕೂಲಿ’ ಬಳಿಕ ರಜಿನಿಕಾಂತ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್ 2’ ಶೂಟಿಂಗ್ ಪೂರ್ಣಗೊಳಿಸಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆಯೇ ರಜಿನಿಕಾಂತ್ ತಮ್ಮ ವೃತ್ತಿ ಜೀವನದ 173ನೇ ಮತ್ತು 174ನೇ ಸಿನಿಮಾಗಳನ್ನು ಘೋಷಿಸಿದ್ದರು. ಈ ಎರಡು ಚಿತ್ರಗಳಲ್ಲಿ ಕಮಲ್-ರಜಿನಿ ಒಂದಾಗುತ್ತಿದ್ದಾರೆ. 173ನೇ ಚಿತ್ರದಲ್ಲಿ ರಜಿನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದು, ಕಮಲ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು 174ನೇ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳಲಿರುವುದು ವಿಶೇಷ. ಸದ್ಯ 173ನೇ ಸಿನಿಮಾಗೆ ಚಾಲನೆ ಸಿಕ್ಕಿದ್ದು, ಫಸ್ಟ್ ಲುಕ್ ಪೋಸ್ಟರ್ ಜತೆಗೆ ಟೈಟಲ್ ಅನೌನ್ಸ್ ಮಾಡಲಾಗಿದೆ. ಚಿತ್ರಕ್ಕೆ ‘ಧರ್ಮನ್’ ಎಂದು ಶೀರ್ಷಿಕೆ ಫಿಕ್ಸ್ ಮಾಡಲಾಗಿದ್ದು, ಇಲ್ಲಿ ರಜಿನಿಕಾಂತ್ ಡೆಡ್ಲಿ ಡಾಕ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ನಲ್ಲಿ ತಲೈವಾ, ಆಪರೇಷನ್ ಥಿಯೇಟರ್‌ನಲ್ಲಿ ಕೈಯಲ್ಲಿ ಚಿಕ್ಕ ಚಾಕು ಹಿಡಿದು, ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಹೇರ್‌ಸ್ಟೈಲ್, ಲುಕ್ ಹಾಗೂ ಕಾಸ್ಟ್ಯೂಮ್ ಗಮನ ಸೆಳೆಯುತ್ತದೆ. ಈ ಚಿತ್ರಕ್ಕೆ ಅಶ್ವತ್ಥ್ ಮಾರಿಮುತ್ತು ನಿರ್ದೇಶನವಿರಲಿದೆ. ಮೊದಲಿಗೆ ಸಿ. ಸುಂದರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಅವರ ಜಾಗಕ್ಕೆ ಸಿಬಿ ಚಕ್ರವರ್ತಿ ಬಂದಿದ್ದರು. ಕೊನೆಗೆ ಅವರೂ ಹಿಂದೆ ಸರಿದ ಕಾರಣ, ಈ ಪ್ರಾಜೆಕ್ಟ್ ಅಶ್ವತ್ಥ್ ಕೈ ಸೇರಿದೆ. ಇಲ್ಲಿ ರಜಿನಿಕಾಂತ್ ಜತೆ ಸಿಮ್ರಾನ್, ರಾಶಿ ಖನ್ನಾ ಅಭಿನಯಿಸುತ್ತಿದ್ದಾರೆ. ‘ಪೆಟ್ಟಾ’ ತೆರೆಕಂಡು ಏಳು ವರ್ಷಗಳ ಬಳಿಕ ರಜಿನಿ-ಸಿಮ್ರಾನ್ ಮತ್ತೆ ಒಂದಾಗುತ್ತಿದ್ದಾರೆ. ಬುಧವಾರ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಇಂದಿನಿಂದ (ಜೂ. 25) ಶೂಟಿಂಗ್ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತಾದರೆ 2027ರ ಜೂನ್ ವೇಳೆಗೆ ‘ಧರ್ಮನ್’ ತೆರೆಗೆ ಬರಲಿದೆ. -ಏಜೆನ್ಸೀಸ್

ಮಾತಾಡಿದ್ರೂ ತಪ್ಪು, ಮಾತಾಡದಿದ್ರೂ ತಪ್ಪು

ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿರುವುದು ರಜಿನಿಕಾಂತ್ ಅಸೂಯೆಗೆ ಕಾರಣವಾಗಿದೆ ಎಂಬ ಚರ್ಚೆ ಕೆಲ ತಿಂಗಳ ಹಿಂದೆ ನಡೆದಿತ್ತು. ಆಗ ಸ್ವತಃ ರಜಿನಿಯವರೇ ಸ್ಪಷ್ಟನೆ ನೀಡಿ, ನಂಗೆ ಯಾವುದೇ ಅಸೂಯೆ ಇಲ್ಲ ಎಂದಿದ್ದರು. ಆದರೆ, ನಟ ವಿಜಯ್ ಹುಟ್ಟುಹಬ್ಬಕ್ಕೆ ರಜಿನಿಕಾಂತ್ ಶುಭ ಕೋರದ ಕಾರಣ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಅದಕ್ಕೆ ಅವರೇ ಉತ್ತರಿಸಿದ್ದಾರೆ. ‘ಬೇರೆಯವರ ಬಗ್ಗೆ ಮಾತನಾಡಲು ಹೇಳಿದರೆ, ನಾನು ಸ್ವಲ್ಪ ಹಿಂಜರಿಯುತ್ತೇನೆ. ಏಕೆಂದರೆ, ನಾನು ಮಾತನಾಡಿದಾಗಲೆಲ್ಲ ಅದು ನನಗೂ ಹಾಗೂ ಅವರಿಗೂ ಸಮಸ್ಯೆಗೆ ಕಾರಣವಾಗುತ್ತದೆ. ಅಥವಾ ಬೇರೊಬ್ಬರನ್ನು ಕೆರಳಿಸುತ್ತದೆ. ಅಕಸ್ಮಾತ್ ನಾನು ಮೌನ ವಹಿಸಿದರೆ, ಕೆಲವರು ನನ್ನ ಮೌನವನ್ನು ಪ್ರಶ್ನಿಸುವ ಜತೆಗೆ ನನ್ನನ್ನು ಟೀಕಿಸುತ್ತಾರೆ. ಮಾತನಾಡಿದರೂ, ಓಹೋ! ಇವರು ಅವರ ಬಗ್ಗೆ ಮಾತನಾಡಿದ್ದಾರೆ ಎಂದು ವಿಶೇಷ ಕಥೆ ಕಟ್ಟುತ್ತಾರೆ’ ಎಂದು ಉದ್ಗರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net