ವಿವಾದ ಅಲೆಯಲ್ಲಿ ಸ್ಟಾರ್ ನಟನ ಪರದಾಟ! ರಿಲೀಸ್ ಆದ​ 2 ಚಿತ್ರವು ಫ್ಲಾಪ್​, ಬೆಂಬಿಡದ ಆರೋಪ

ವಿಜಯವಾಣಿ - 2024-08-09T071026.955
Published on

ಸಿನಿಮಾ ನಟರು ಅಂದಮೇಲೆ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇರುತ್ತದೆ. ತೆರೆಮೇಲೆ ತಮ್ಮ ಅಭಿನಯ ಮೆಚ್ಚಿ, ಮುಂದಿನ ಚಿತ್ರಗಳಿಗೆ ಕಾಯುವ ಸಿನಿಪ್ರೇಕ್ಷಕರು ಒಂದು ವರ್ಗವಾದರೆ, ವೈಯಕ್ತಿಕ ಜೀವನದಲ್ಲಿ ಅವರು ಹೇಗಿದ್ದಾರೆ? ಇತರರಿಗೂ ಮಾದರಿಯೇ? ಎಂದೆಲ್ಲಾ ಗಮನಿಸುವವರ ವರ್ಗ ಮತ್ತೊಂದು. ಆದರೆ, ವಿವಾದ ಸುಳಿಗೆ ಒಮ್ಮೆ ಸಿಲುಕಿಕೊಂಡಾಗ ಅಂತಹ ನಟ-ನಟಿಯರು ಮಾಡಿದ ತಪ್ಪು ನಿಜವೇ? ಎಂಬುದನ್ನು ತಿಳಿಯುವ ವೇಳೆಗೆ ಒಂದರ ನಂತರ ಮತ್ತೊಂದು ಆರೋಪಗಳು ಬೆಳೆದು, ಅದು ಅರ್ಥವಾಗದ ಸ್ಥಿತಿ ತಲುಪಿರುತ್ತದೆ. ಅಂತಹದ್ದೇ ಒಂದು ಪರಿಸ್ಥಿತಿ ಇದೀಗ ಟಾಲಿವುಡ್​ ಅಂಗಳದಲ್ಲಿ ಕಳೆದ ಒಂದು ತಿಂಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್​ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಷಯ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ದಿನಕ್ಕೊಂದು ಟ್ವಿಸ್ಟ್​ ಅನ್ನೋದಕ್ಕಿಂತ ಕ್ಷಣಕ್ಕೊಂದು ಟ್ವಿಸ್ಟ್ ಎದುರಾಗುತ್ತಿವೆ.

ರಾಜ್ ತರುಣ್ ಮತ್ತು ನಟಿ ಮಾಳ್ವಿ ವಿರುದ್ಧ ದೂರು ದಾಖಲಿಸಿರುವ ಲಾವಣ್ಯ, ಇತ್ತೀಚೆಗಷ್ಟೇ ರಾಜ್ ಸ್ನೇಹಿತ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ನೀಡಿದ್ದಾರೆ. ಇನ್ನು ಸರಣಿ ಆರೋಪಗಳನ್ನು ಎದುರಿಸುತ್ತಿರುವ ನಟ ರಾಜ್​, ತನ್ನ ಮೇಲೆ ಪ್ರೇಯಸಿ ಹೂಡಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನೇರವಾಗಿ ಹೈಕೋರ್ಟ್​ ಮೊರೆ ಹೋಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನು ವಿವಾದದ ಅಲೆಯಲ್ಲಿ ಸಿಲುಕಿರುವ ನಟನ ಪರಿಸ್ಥಿತಿಯನ್ನೇ ಅಸ್ತ್ರವನ್ನಾಗಿಸಿಕೊಂಡ ಚಿತ್ರದ ನಿರ್ಮಾಪಕರು, ರಾಜ್ ನಟಿಸಿದ್ದ ಎರಡು ಸಿನಿಮಾಗಳನ್ನು ದಿಢೀರ್​ ಬಿಡುಗಡೆಗೊಳಿಸಿದರು.

ಭಾರೀ ವಿವಾದದ ನಡುವೆಯೇ ನಟನ ಎರಡು ಬಹುನಿರೀಕ್ಷಿತ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು, ಎರಡು ಕೂಡ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡದೆ ಥಿಯೇಟರ್​ನಿಂದ ಎತ್ತಂಗಡಿ ಆಗುವ ಸಮೀಪದಲ್ಲಿದೆ. ಸದ್ಯ ವಿವಾದದಿಂದ ಹೊರಬರಲಾಗದ ರಾಜ್​ ತರುಣ್​ಗೆ ಅತ್ತ ಬಹಳ ದೊಡ್ಡ ನಿರೀಕ್ಷೆಯಿಂದ ಅಭಿನಯದ ಎರಡು ಸಿನಿಮಾಗಳು ಕೂಡ ದಿಢೀರ್​ ತೆರೆಗೆ ಅಪ್ಪಳಿಸಿ, ಏಕಾಏಕಿ ಹೊರಬೀಳುವ ಪರಿಸ್ಥಿತಿಯಲ್ಲಿದೆ. ಚಿತ್ರದಲ್ಲಿಯೂ ಹಿನ್ನಡೆ ಅನುಭವಿಸುತ್ತಿರುವ ರಾಜ್​ಗೆ ಇತ್ತ ಕೇಸ್​ನಿಂದಲೂ ಹೊರಬರಲಾಗುತ್ತಿಲ್ಲ. ಭಾರೀ ವಿವಾದಕ್ಕೆ ಗುರಿಯಾಗಿರುವ ರಾಜ್ ತರುಣ್​ ನಿರೀಕ್ಷಣಾ ಜಾಮೀನು ಪಡೆಯಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net