ನಟ ಡಾಲಿ ಧನಂಜಯ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿ, ನಿರ್ಮಿಸಿರುವ "ಮದರ್ ಪ್ರಾಮಿಸ್' ಕಳೆದ ಶುಕ್ರವಾರ (ಜು. 10) ರಿಲೀಸ್ ಆಗಿದ್ದು, ಕೆಲವರು ಬೇಕೆಂದೇ ಜಾಲತಾಣದಲ್ಲಿ ನೆಗಟಿವ್ ಕ್ಯಾಂಪೇನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಸಿನಿಮಾ ನಿರ್ಮಾಣಕ್ಕೆ ಗುಡ್ಬೈ ಹೇಳಲು ನಿರ್ಧರಿಸಿದ್ದಾರೆ. "2021ರಿಂದ "ಬಡವ ರಾಸ್ಕಲ್' ಬಳಿಕ ಈ ಐದು ವರ್ಷಗಳಲ್ಲಿ "ಟಗರು ಪಲ್ಯ', "ಜೆಸಿ', "ವಿದ್ಯಾಪತಿ', "ಮದರ್ ಪ್ರಾಮಿಸ್' ಸಿನಿಮಾಗಳು, "ಜೆರಾಕ್ಸ್' ವೆಬ್ಸರಣಿ ನಿರ್ಮಿಸಿದ್ದೇನೆ. "ಆರ್ಕೇಸ್ಟ್ರಾ ಮೈಸೂರು', "ಡೇರ್ಡೆವಿಲ್ ಮುಸ್ತಾಫಾ' ಚಿತ್ರಗಳನ್ನು ಪ್ರೆಸೆಂಟ್ ಮಾಡಿದ್ದೇನೆ. "ಹೆಗ್ಗಣ ಮುದ್ದು' ಬಳಿಕ ನಾನು ಮತ್ತೆ ಸಿನಿಮಾ ನಿರ್ಮಿಸುವುದಿಲ್ಲ. ಏಕೆಂದರೆ, ನನಗೂ ಸುಸ್ತಾಗುತ್ತದೆ. ನಟನಾಗಿ ಸಿನಿಮಾ ಎಂಜಾಯ್ ಮಾಡಬೇಕು ಅಂತ ನನಗೂ ಆಸೆ ಇದೆ. ಹೊಸ ಪ್ರಯತ್ನಗಳು ನಡೆಯುತ್ತಿರುವಾಗ, ತೊಂದರೆ ಕೊಡಬಾರದು ಎಂಬ ಮನಸ್ಥಿತಿ ಇರಬೇಕಲ್ಲವೇ? ಸಿನಿಮಾ, ಸಾಹಿತ್ಯ, ನಾಟಕ ಎಲ್ಲವೂ ಕನ್ನಡ ಕಟ್ಟುವ ಕೆಲಸಗಳೇ. ಚಿತ್ರರಂಗಕ್ಕೆ ಕೊಡುಗೆ ನೀಡಬೇಕು ಅಂತ ಸಿನಿಮಾ ನಿರ್ಮಿಸುತ್ತಿದ್ದೇನೆ. ನನ್ನ ಸಿನಿಮಾ ಮಾತ್ರವಲ್ಲ, ಶಿವಣ್ಣ, ಸುದೀಪ್, ದರ್ಶನ್, ಯಶ್ ಚಿತ್ರಗಳು ಬಿಡುಗಡೆ ಆದಾಗಲೂ ನೆಗಟಿವ್ ಕಮೆಂಟ್ಗಳು ಬರುತ್ತವೆ. ಎಲ್ಲರನ್ನೂ ನಗಿಸುವ ಪ್ರಯೋಗಾತ್ಮಕ ಫ್ಯಾಮಿಲಿ ಎಂಟರ್ಟೇನರ್ ಚಿತ್ರವಿದು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವಿಮರ್ಶೆಗಳು ಬೇಕು. ಆದರೆ, ಬೇಕೆಂದೇ ಸೋಷಿಯಲ್ ಮೀಡಿಯಾದಲ್ಲಿ ನೆಗಟಿವ್ ವಿಡಿಯೋ, ಕಮೆಂಟ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಮುಂದೆ ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕು ಅಂತನ್ನಿಸುತ್ತಿದೆ. ಎಲ್ಲರೂ ಎಲ್ಲ ಚಿತ್ರಗಳನ್ನೂ ಒಪ್ಪುವಂತೆ ಮಾಡಲಾಗುವುದಿಲ್ಲ. ಕೆಲವರಿಗೆ ಅದ್ಭುತ ಎನಿಸುವ ಚಿತ್ರಗಳು, ಕೆಲವರಿಗೆ ಇಷ್ಟವಾಗಿರುವುದಿಲ್ಲ. ಆದರೆ, ಹೆಚ್ಚು ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರರಂಗದ ಬೆಳವಣಿಗೆ ಸಾಧ್ಯ. ಪದೇ ಪದೆ ಕೆಟ್ಟ ಅನುಭವಗಳು ರಿಪೀಟ್ ಆದರೆ ಸುಸ್ತಾಗುತ್ತದೆ. ನಟನಾಗಿ ನನಗೂ ಕನಸುಗಳಿವೆ. ಆಸ್ಪತ್ರೆಯಲ್ಲಿ ಮಲಗಿದಾಗ ಬೇರೆ ಯಾರೋ ಬಂದು ಬಿಲ್ ಕಟ್ಟುವ ಪರಿಸ್ಥಿತಿ ಬರಬಾರದು ಅಷ್ಟೇ. ಯಾರೆಷ್ಟೇ ನೆಗಟಿವ್ ಮಾಡಿದರೂ, ನನ್ನ ಖುಷಿಯನ್ನಂತೂ ಕಿತ್ತುಕೊಳ್ಳಲಾಗುವುದಿಲ್ಲ. ಅದರಿಂದ ಅವರಿಗೆ ಟೈಮ್ ವೇಸ್ಟ್ ಅಷ್ಟೇ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂದಹಾಗೆ, "ಮದರ್ ಪ್ರಾಮಿಸ್' ಚಿತ್ರವನ್ನು 20 ನಿಮಿಷಗಳ ಕಾಲ ಟ್ರಿಮ್ ಮಾಡಲಾಗಿದ್ದು, ಶುಕ್ರವಾರದಿಂದ (ಜು. 17) 166 ನಿಮಿಷಗಳ ಬದಲು 140 ನಿಮಿಷಗಳ ವರ್ಷನ್ ಪ್ರದರ್ಶನಗೊಳ್ಳುತ್ತಿದೆ.