

ಉಡುಪಿ: ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಸಲುವಾಗಿ ತಮ್ಮ ಕುಟುಂಬದೊಂದಿಗೆ ಆಗಮಿಸಿದ ತೆಲುಗು ಚಿತ್ರನಟ ಜೂ. ಎನ್ಟಿಆರ್ರನ್ನು 'ಕಾಂತಾರ' ಖ್ಯಾತಿಯ ನಟ ರಿಷಭ್ ಶೆಟ್ಟಿ ಸ್ವಾಗತಿಸಿದ್ದು, ಎನ್ಟಿಆರ್ ಅಮ್ಮನ ಕಾಲಿಗೆ ನಮಸ್ಕರಿಸಿ ಆರ್ಶಿವಾದ ಪಡೆದಿದ್ದಾರೆ.
ಕೃಷ್ಣ, ಮುಖ್ಯ ಪ್ರಾಣ ದೇವರ ದರ್ಶನ ಕೈಗೊಂಡ ಜೂ. ಎನ್ಟಿಆರ್ ಕುಟುಂಬವನ್ನು ರಿಷಬ್ ಸ್ವಾಗತಿಸಿದ್ದಾರೆ. ಈ ವೇಳೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಉಪಸ್ಥಿತರಿದ್ದರು. ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಪಡೆದ ಎನ್ಟಿಆರ್, ತಮ್ಮ ತಾಯಿ ಮತ್ತು ಕುಟುಂಬಸ್ಥರಿಗೆ ಒಂದಷ್ಟು ಸಮಯ ದೇವಾಲಯದಲ್ಲಿ ಕಳೆದರು.
ತಮ್ಮ ತಾಯಿ ಮೂಲತಃ ಉಡುಪಿಯವರಾದ ಕಾರಣ ಜೂ.ಎನ್ಟಿಆರ್ ಅವರು ಕನ್ನಡ ಭಾಷೆಯನ್ನು ಚೆನ್ನಾಗಿ ಮಾತನಾಡಲು ಹಾಗೂ ಅರ್ಥೈಸಿಕೊಳ್ಳಬಲ್ಲರು. ಈ ಹಿಂದೆ ಪುನೀತ್ ರಾಜ್ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ 'ಗೆಳೆಯ ಗೆಳೆಯ' ಹಾಡನ್ನು ಹಾಡಿ, ಕನ್ನಡ ಸಿನಿಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಕನ್ನಡಿಗರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಎನ್ಟಿಆರ್, ರಾಷ್ಟ್ರಪ್ರಶಸ್ತಿ ಪಡೆದ 'ಕಾಂತಾರ' ಚಿತ್ರವನ್ನು ನೋಡಿ ಖುದ್ದಾಗಿ ರಿಷಭ್ಗೆ ಕರೆ ಮಾಡಿ ಅಭಿನಂದನೆ, ಮೆಚ್ಚುಗೆ ವ್ಯಕ್ತಪಡಿಸಿದ್ದರು.