ನೀನಾಸಂ ಪಾಠ !: ಕಲಾವಿದರಲ್ಲಿ ಭೂಮಿ ತೂಕದ ಸಹನೆ ಇರಲಿ ಎಂದ ನಟ ಸತೀಶ್

SATISH 2
Published on

ಬೆಂಗಳೂರು: ನಟ ನೀನಾಸಂ ಸತೀಶ್ ನಟರಷ್ಟೇ ಅಲ್ಲದೇ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ‘ರಾಕೆಟ್’, ‘ಡಿಯರ್ ವಿಕ್ರಮ್’, ‘ಪೆಟ್ರೋಮ್ಯಾಕ್ಸ್’ ಚಿತ್ರಗಳಲ್ಲಿ ನಟಿಸುವ ಜತೆಗೆ ತಮ್ಮ ‘ಸತೀಶ್ ಪಿಕ್ಚರ್ ಹೌಸ್’ ಮೂಲಕ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು. ಇದೇ ಮೊದಲ ಬಾರಿಗೆ ಸತೀಶ್ ಬೇರೆ ತಂಡದ ಚಿತ್ರವನ್ನು ತಮ್ಮ ಬ್ಯಾನರ್ ಮೂಲಕ ಅರ್ಪಿಸುತ್ತಿದ್ದಾರೆ. ಹೆಸರು ‘ವೃತ್ತ’. ಇತ್ತೀಚೆಗಷ್ಟೆ ಲಿಖಿತ್ ಕುಮಾರ್ ನಿರ್ದೇಶನದ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಸತೀಶ್, ಹೊಸ ತಂಡಕ್ಕೆ ಶುಭ ಹಾರೈಸುವ ಜತೆಗೆ ಸಕ್ಸಸ್ ಪಾಠ ಮಾಡಿದರು.

‘ಒಂದೇ ಸಿನಿಮಾದಿಂದ ಯಾರೂ ಹೀರೋ ಆಗಲು ಸಾಧ್ಯವಿಲ್ಲ. ಅದು ಪರಿಶ್ರಮ ಕೇಳುತ್ತದೆ. ಒಂದು ಯಶಸ್ಸಿನಿಂದ ಎಲ್ಲವೂ ಪೂರ್ಣವಾಗಲ್ಲ. ಆದರೆ, ಹತ್ತು ವರ್ಷಗಳ ಕಾಲ ನೀವು ನಿಂತಿದ್ದೀರಿ, ನಿಮ್ಮ ಸಿನಿಮಾಗಳು ಬರುತ್ತಿವೆ, ಜನ ಇಷ್ಟಪಡುತ್ತಿದ್ದಾರೆ ಎಂದರೆ ಮಾತ್ರ ಅದು ನಿಜವಾದ ಸಕ್ಸಸ್. ಈ ಮಧ್ಯೆ, ಕಷ್ಟ, ಸಂಕಟ, ಅವಮಾನ ಎಲ್ಲವೂ ಎದುರಾಗುತ್ತವೆ ಇದನ್ನು ಸಹಿಸಿಕೊಳ್ಳುವ ಭೂಮಿ ತೂಕದ ಸಹನೆ ನಮ್ಮಲ್ಲಿರಬೇಕು. ನಮ್ಮ ಸಿನಿಮಾ ನೋಡಲೆಂದು ಜನ ತಮ್ಮ ದುಡಿಮೆ ದುಡ್ಡನ್ನು ನಮಗೆ ವೆಚ್ಚ ಮಾಡುತ್ತಾರೆ. ಆ ಹಣದ ಋಣ ನಮ್ಮ ಮೇಲಿದೆ. ಹಾಗಾಗಿ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸಬೇಕು’ ಎಂದು ಕಲಾವಿದರಿಗೆ ನೀತಿಪಾಠ ಮಾಡಿದರು. ಹಾಗೇ ‘ಇದೇ ತಾಳ್ಮೆಯೊಂದಿಗೆ ಬಂದವನು ನಾನು, ಉತ್ತರ ಏನಿದ್ದರೂ ಸಿನಿಮಾದ ಮೂಲಕ ನೀಡುವೆ. ನನ್ನ ಹಾಗೂ ಮಹೇಶ್ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಬರಲಿದೆ’ ಎಂದು ಹೊಸ ಚಿತ್ರವನ್ನೂ ಸತೀಶ್ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net