ಪುಟ್ಟ ಮಗನ ಜತೆ ದೋಣಿವಿಹಾರಕ್ಕೆ ಹೋಗಿದ್ದಾಗಲೇ ನೀರಿಗೆ ಹಾರಿದ ನಟಿ!

actress
Published on

ಕ್ಯಾಲಿಫೋರ್ನಿಯಾ: ತಮ್ಮ ನಾಲ್ಕು ವರ್ಷದ ಮಗನ ಜತೆ ದಕ್ಷಿಣ ಕ್ಯಾಲಿಫೋರ್ನಿಯಾದ ಸರೋವರವೊಂದರಲ್ಲಿ ದೋಣಿವಿಹಾರಕ್ಕೆ ಹೋಗಿದ್ದ ಖ್ಯಾತ ನಟಿ ನಯಾ ರಿವೇರಾ ನಾಪತ್ತೆಯಾಗಿದ್ದಾರೆ. ಮಗ ದೋಣಿಯಲ್ಲಿ ಸುರಕ್ಷಿತವಾಗಿದ್ದು, ಆತನನ್ನು ರಕ್ಷಿಸಲಾಗಿದೆ.

33 ವರ್ಷ ವಯಸ್ಸಿನ ಈ ನಟಿ ಲಾಸ್‌ಏಂಜಲೀಸ್ ಸಮೀಪದ ಪಿರು ಸರೋವರದಲ್ಲಿ ದೋಣಿಯನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಗನೊಂದಿಗೆ ವಿಹಾರಕ್ಕೆ ಹೋಗಿದ್ದರು. ‘‘ತಾಯಿ ನೀರಿಗೆ ಹಾರಿದ್ದನ್ನು ನಾನು ನೋಡಿದೆ. ಆದರೆ ಎಷ್ಟೊತ್ತಾದರೂ ಮೇಲೆ ಬರಲೇ ಇಲ್ಲ’’ ಎಂಬುದಾಗಿ ಬಾಲಕ ಪೊಲೀಸರೆದುರು ಹೇಳಿದ್ದಾನೆ.

ಪೊಲೀಸರು ಹೆಲಿಕಾಪ್ಟರ್ ಮತ್ತು ದೋಣಿಗಳನ್ನು ಬಳಸಿ ನಟಿಗಾಗಿ ಶೋಧ ನಡೆಸಿದರು. ಆದರೆ ರಾತ್ರಿಯಾಗಿದ್ದರಿಂದ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಬೆಳಗ್ಗೆ ಮತ್ತೆ ಶೋಧ ಆರಂಭಿಸುವುದಾಗಿ ತಿಳಿಸಿದ್ದಾರೆ. ಫಾಕ್ಸ್ ಟಿವಿಯಲ್ಲಿ 2009ರಿಂದ 2015ರವರೆಗೆ ಪ್ರಸಾರವಾದ ಪ್ರಸಿದ್ಧ ಮ್ಯೂಸಿಕಲ್ ಕಾಮೆಡಿ ‘ಗ್ಲೀ’ಯಲ್ಲಿನ ರಿವೇರಾ ನಟನೆ ಜನಮನ್ನಣೆ ಗಳಿಸಿತ್ತು. ಅದರಲ್ಲಿ ನಟಿಸುವಾಗಲೇ ಸಹ ನಟ ಮಾರ್ಕ್ ಸಾಲಿಂಗ್ ಜತೆ ಡೇಟಿಂಗ್‌ನಲ್ಲಿ ತೊಡಗಿದ್ದರು. ಆತನ ವಿರುದ್ಧ 2018ರಲ್ಲಿ ಚೈಲ್ಡ್ ಪೋರ್ನೋಗ್ರಫಿ ಆರೋಪ ಕೇಳಿಬಂದಿತ್ತು. ನಂತರ ಆ ನಟ ಆತ್ಮಹತ್ಯೆ ಮಾಡಿಕೊಂಡಿದ್ದ.

ಇನ್ನೊಬ್ಬ ನಟ ರಿಯಾನ್ ಡೋರ್ಸೆಯನ್ನು ಮದುವೆಯಾಗಿದ್ದ ರಿವೇರಾ ನಾಲ್ಕು ವರ್ಷಗಳ ದಾಂಪತ್ಯದ ಬಳಿಕ 2018ರ ಜುಲೈನಲ್ಲಿ ವಿಚ್ಛೇದನ ಪಡೆದಿದ್ದರು. ಇದಕ್ಕೂ ಮುನ್ನ 2013ರಲ್ಲಿ ರಾಪರ್ ಬಿಗ್ ಸಿಯಾನ್‌ರ ಜತೆಗೆ ರಿವೇರಾ ಸಂಬಂಧ ಹೊಂದಿದ್ದರು. ಆದರೆ ಈ ಸಂಬಂಧ ಒಂದೇ ವರ್ಷದಲ್ಲಿ ಅಂತ್ಯಗೊಂಡಿತ್ತು.

ನಿನ್ನೆಯಷ್ಟೇ (ಜುಲೈ 7) ಟ್ವಿಟರ್‌ನಲ್ಲಿ ತಮ್ಮ ಮಗನ ಜತೆ ಚಿತ್ರ ಹಂಚಿಕೊಂಡಿದ್ದ ನಟಿ, ನಾವಿಬ್ಬರೇ ಎಂಬ ಕ್ಯಾಪ್ಷನ್‌ ಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net