

ಚೆನ್ನೈ: ತಮ್ಮ ನಟನೆ, ವಿಭಿನ್ನ ಮ್ಯಾನರಿಸಂ ಮೂಲಕ ಭಾರತ ಮಾತ್ರವ್ಲಲದೇ ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Thalapathy Vijay) ನಟನೆ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ತಮಿಳ್ ವೆಟ್ರಿ ಮುನ್ನೇತ್ರ ಕಳಗಂ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶಿರುವ ವಿಜಯ್ ಖ್ಯಾತ ನಟರೊಬ್ಬರ ಮಗನ ನೆನೆಪಿನ ಶಕ್ತಿ ಮರಳಲು ಕಾರಣರಾಗಿದ್ಧಾರೆ ಎಂಬ ವಿಚಾರ ರಿವೀಲ್ ಆಗಿದ್ದು, ಎಲ್ಲರ ಮನ ಗೆಲ್ಲುತ್ತಿದೆ.
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಹಿರಿಯ ನಟ ನಾಸರ್ (Nassar) ಅವರು ಮೂರು ದಶಕಗಳಿಗೂ ಹೆಚ್ಚಿನ ಕಾಲ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇಂದಿಗೂ ಬಹುಬೇಡಿಕೆಯ ನಟ ಎನ್ನಿಸಿಕೊಂಡಿದ್ದಾರೆ. ನಟ ನಾಸರ್ ಅವರ ಪುತ್ರ 2014ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದರು. ಸುಮಾರು 14 ದಿನಗಳ ಕಾಲ ಕೋಮಾದಲ್ಲಿದ್ದ ನಟನ ಮಗ ಪ್ರಜ್ಞೆ ಬಂದ ಕೂಡಲೇ ನಟ ದಳಪತಿ ವಿಜಯ್ (Thalapathy Vijay) ಅವರ ಹೆಸರೇಳಿದ್ದು, ಈ ವಿಚಾರವನ್ನು ಸ್ವತಃ ನಾಸರ್ ಅವರೇ ರಿವೀಲ್ ಮಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಾಸರ್ (Nassar), ನನ್ನ ಮಗ ಫೈಜಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದ. 14 ದಿನಗಳ ಬಳಿಕ ಆತನಿಗೆ ಪ್ರಜ್ಞೆ ಮರಳಿತು. ಆತ ಎಚ್ಚರಗೊಂಡ ಬಳಿಕ ಮೊದಲಿಗೆ ಹೇಳಿದ್ದು, ವಿಜಯ್ (Vijay) ಅವರ ಹೆಸರು. ಏಕೆಂದರೆ ಆತನ ಗೆಳೆಯನ ಹೆಸರು ಕೂಡ ವಿಜಯ್ (Vijay) ಕುಮಾರ್ ಆಗಿದ್ದು, ಅಪಘಾತ ನಡೆದ ವೇಳೆ ಆತ ಕೂಡ ಜತೆಯಲ್ಲಿ ಇದ್ದ.
ನಮ್ಮ ಕುಟುಂಬದವರಿಗೆ ಆತನ ಹೆಸರು ನೆನಪಿದೆ ಎಂದು ಖುಷಿಪಟ್ಟೆವು. ಆದರೆ, ಫೈಜಲ್ಗೆ ವಿಜಯ್ನನ್ನು (Vijay) ಗುರತಿಸಲು ಸಾಧ್ಯವಾಗಲಿಲ್ಲ. ಈ ವಿಚಾರ ನಮಗೆ ಸಾಕಷ್ಟು ಗೊಂದಲ ಮೂಡಿಸಿತು. ಆ ಬಳಿಕ ಫೈಜಲ್ ಹೇಳುತ್ತಿರುವುದು ದಳಪತಿ ವಿಜಯ್ (Thalapathy Vijay) ಬಗ್ಗೆ ಎಂಬುದು ನಮಗೆ ತಿಳಿಯಿತು. ಆ ಬಳಿಕ ವಿಜಯ್ ಅವರ ಸಿನಿಮಾ ಹಾಗೂ ಹಾಡುಗಳನ್ನು ಹಾಕಲು ಶುರು ಮಾಡಿದೆವು. ವಿಜಯ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ನನ್ನ ಮಗನ ಆರೋಗ್ಯ ವಿಚಾರಿಸಿದ್ದರು. ನನ್ನ ಹಾಗೂ ಫೈಜಲ್ ಬಾಳಲ್ಲಿ ವಿಜಯ್ (Thalapathy Vijay) ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ ಎಂದು ನಟ ನಾಸರ್ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.