

ಲಖನೌ: ಹೊಸ ವರ್ಷದಂದೇ ತಾಯಿ ಸೇರಿದಂತೆ ನಾಲ್ವರು ಸಹೋದರಿಯರನ್ನು ಭೀಕರವಾಗಿ ವ್ಯಕ್ತಿಯೋರ್ವ ಕೊಂದಿದ್ದು (Murder), ಘಟನೆ ಸಂಬಂಧ ಪೊಲೀಸರು ಆರೋಪಿ ಅರ್ಷದ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ಧಾರೆ. ವಿಚಾರಣೆ ವೇಳೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಆರೋಪಿ ಕೊಲೆ ಮಾಡುವುದಕ್ಕೂ ಮುನ್ನ ಮಾತನಾಡಿರುವ ವಿಡಿಯೋ ಒಂದು ಪೊಲೀಸರಿಗೆ ಲಭಿಸಿದ್ದು, ಕೊಲೆಗೆ ಕಾರಣವನ್ನು ಕೇಳಿ ಶಾಕ್ ಆಗಿದ್ದಾರೆ.
ಮೃತರನ್ನು ಅಸ್ಮಾ, ಅಲಿಯಾ (9), ಅಲ್ಶಿಯಾ (19), ಅಕ್ಷಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದ್ದು, ಆರೋಪಿ ಅರ್ಷದ್ ಕೊಲೆ (Murder) ಮಾಡುವ ನಿರ್ಧಾರ ತೆಗೆದುಕೊಂಡಿದ್ದರ ಕುರಿತು ವಿಡಿಯೋ ಒಂದನ್ನು ಮಾಡಿದ್ದು, ಅವರ ಗೌರವವನ್ನು ಉಳಿಸಿದ್ದೇನೆ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಅಕ್ಕಪಕ್ಕದ ಜನರ ಕಿರುಕುಳ ತಾಳಲಾರದೆ ನಾನು ಈ ರೀತಿ ಮಾಡಬೇಕಾಗಿ ಬಂತು. ನಾನು ನನ್ನ ತಾಯಿ ಹಾಗೂ ಸಹೋದರಿಯರನ್ನು ಕೊಂದಿದ್ದೇನೆ (Murder). ವಿಡಿಯೋ ಮಾಡುತ್ತಿರುವ ಉದ್ದೇಶವೇನೆಂದರೆ ಈ ವಿಡಿಯೋ ಪೊಲೀಸರಿಗೆ ಸಿಕ್ಕಿದಾಗ ಕೊಲೆಗೆ ಅಸಲಿ ಕಾರಣ ಏನೆಂಬುದು ತಿಳಿಯಬೇಕು. ನಮ್ಮ ಮನೆಯನ್ನು ಸ್ಥಳೀಯರು ಲ್ಯಾಂಡ್ ಮಾಫಿಯಾದವರ ಜೊತೆ ಸೇರಿ ವಶಪಡಿಸಿಕೊಂಡಿದ್ದು, ನಾವು ಧ್ವನಿ ಎತ್ತದಂತೆ ಮಾಡಿದ್ದರು.
ಕಳೆದ 15ದಿನಗಳಿಂದ ನಾವು ಮನೆಯಲ್ಲಿ ಇಲ್ಲ ರಸ್ತೆಯಲ್ಲಿ ಮಲಗಿ ಜೀವನ ಸಾಗಿಸುತ್ತಿದ್ಧೇವೆ. ನನ್ನ ತಾಯಿ ಹಾಗೂ ಸಹೋದರಿಯರು ಚಳಿಯಲ್ಲಿ ಅಲೆದಾಡುವುದು ನನಗೆ ಇಷ್ಟವಿಲ್ಲ. ದಾಖಲೆಗಳು ನಮ್ಮ ಹೆಸರಿನಲ್ಲಿದ್ದರು ಸಹ ಮನೆಯನ್ನು ಸ್ಥಳೀಯರು ಹಾಗೂ ಲ್ಯಾಂಡ್ ಮಾಫಿಯಾದವರು ವಶಪಡಿಸಿಕೊಂಡಿದ್ದಾರೆ. ರಾನು, ಅಫ್ತಾಬ್, ಅಲೀಮ್ ಖಾನ್, ಸಲೀಂ, ಆರಿಫ್, ಅಹ್ಮದ್ ಮತ್ತು ಅಜರ್ ಎಂಬುವವರು ನಮಗೆ ಈ ರೀತಿ ಮಾಡಿದ್ದಾರೆ.
ಈ ವ್ಯಕ್ತಿಗಳು ನನ್ನ ಹಾಗೂ ತಾಯಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ನಾಲ್ವರು ಸಹೋದರಿಯರನ್ನು ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ ನಾನು ನನ್ನ ಸಹೋದರಿ ಹಾಗೂ ತಾಯಿಯನ್ನು ಕೊಲೆ ಮಾಡುವ ಪರಿಸ್ಥಿತಿ ಎದುರಾಯಿತು. ನಾವು ಸಹಾಯಕ್ಕಾಗಿ ಹಲವರನ್ನು ಭೇಟಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಈ ರೀತಿ ಮಾಡಬೇಕಾಯಿತು. ನಾನು ಇನ್ನೂ ಕೆಲವೇ ಕ್ಷಣಗಳಲ್ಲಿ ಸಾಯುತ್ತೇನೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮಗೆ ನ್ಯಾಯ ಕೊಡಿಸುವ ಭರವಸೆ ಇದೆ. ಭಾರತದಲ್ಲಿ ಯಾವ ಕುಟುಂಬಕ್ಕೂ ಈ ರೀತಿಯಾಗಬಾರದು ಎಂದು ಅರ್ಷದ್ ವಿಡಿಯೋದಲ್ಲಿ ಹೇಳಿದ್ದಾರೆ.