ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟ ನಾನಿ

Untitled design - 2023-09-05T183528.273
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 15 ವರ್ಷಗಳು ಕಳೆದಿವೆ. ಈ ದಿನದಂದು ಬಿಡುಗಡೆಗೊಂಡಿದ್ದ 'ಅಷ್ಟ ಚಮ್ಮಾ' ಚಿತ್ರದ ಮುಖೇನ ಟಾಲಿವುಡ್​ಗೆ ಹೆಜ್ಜೆಯಿಟ್ಟ ನಟನಿಗೆ ಈಗ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

2008 ರಲ್ಲಿ ನಾಯಕ ನಟನಾಗಿ ಅಭಿನಯಿಸಿದ ಕಾಮಿಡಿ ಚಿತ್ರ 'ಅಷ್ಟ ಚಮ್ಮಾ'ದ ಮೂಲಕ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಾನಿ ಇದೀಗ ಸಿನಿಮಾ ರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಂದರ್ಭವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ನಟ, "ನಾವು 15 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ" ಎಂದು ಆಕಾಶವನ್ನು ನೋಡುತ್ತಿರುವ ಫೋಟೋ ಜತೆಗೆ ಬರೆದು ಪೋಸ್ಟ್ ಮಾಡಿದ್ದಾರೆ.

ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ನಾನಿ, ಇಲ್ಲಿಯವರೆಗೂ ಒಟ್ಟು 30 ಚಲನಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 'ಭೀಮಿಲಿ ಕಬಡ್ಡಿ ಜಟ್ಟು', 'ಅಲಾ ಮೊದಲಿಂದಿ', 'ಪಿಳ್ಳ ಜಮೀನ್ದಾರ್', 'ಈಗ', 'ಯೇವಡೆ ಸುಬ್ರಹ್ಮಣ್ಯಂ', 'ಭಲೇ ಭಲೇ ಮಗಾಡಿವೋಯ್', 'ಜರ್ಸಿ' ಸೇರಿದಂತೆ ಹಲವು ಚಿತ್ರಗಳ ಮುಖೇನ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಾನಿ ಅಭಿನಯದ 30ನೇ ಚಿತ್ರ 'ಹಾಯ್ ನನ್ನ' ಡಿಸೆಂಬರ್ 21 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ನಟನಿಗೆ ಅಭಿಮಾನಿಗಳು ಮತ್ತು ಸಿನಿಮಾ ರಂಗದವರು ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net