ಭಾಷಾ ವಿವಾದಾತ್ಮಕ ಹೇಳಿಕೆ: ದೆವ್ವಗಳು, ಪಿಶಾಚಿಗಳು ತಮಿಳು ಮಾತಾಡೋದು

22.jpg
Published on

ಚಿಕ್ಕಬಳ್ಳಾಪುರ: ದೆವ್ವಗಳು, ಪಿಶಾಚಿಗಳು ಮಾತನಾಡುವ ಭಾಷೆ ತಮಿಳು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕನ್ನಡದ ಬಗ್ಗೆ ಅವೈಜ್ಞಾನಿಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ವಿರುದ್ಧ ನಗರದಲ್ಲಿ ಭಾನುವಾರ ಕೈಗೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಮಲ್ ಹಾಸನ್ ದುರಂಹಕಾರಿ. ಕನ್ನಡಿಗರನ್ನು ಕೆಣಕಿದ್ದಾನೆ. ಕ್ಷಮೆಯನ್ನು ಕೇಳುತ್ತಿಲ್ಲ. ಇಂತಹವರ ಸಿನಿಮಾವನ್ನು ರಾಜ್ಯದಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಯಾರಾದರೂ ಯತ್ನಿಸಿದರೆ ರಣಾಂಗಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ನಟನ ಹೇಳಿಕೆಯನ್ನು ಎಲ್ಲ ಕನ್ನಡ ಸಿನಿಮಾ ನಟರು, ನಿರ್ದೇಶಕರು, ನಿರ್ಮಾಪಕರು ಖಂಡಿಸಲೇ ಬೇಕು. ಹಾಗೆಯೇ ಸರ್ಕಾರವು ಕಮಲ್ ಹಾಸನ್ರನ್ನು ಜೈಲಿನಲ್ಲಿಡಬೇಕು. ಹಾಗೆಯೇ ಮುಂಬರುವ ದಿನಗಳಲ್ಲಿ ನಾಡು ನುಡಿಯ ವಿಚಾರವಾಗಿ ಗೊಂದಲ, ಅವೈಜ್ಞಾನಿಕ ಹೇಳಿಕೆ ನೀಡದಂತೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಕನ್ನಡಕ್ಕೆ ತನ್ನದೇ ಆದ ದೊಡ್ಡ ಇತಿಹಾಸ, ಪರಂಪರೆ, ಸಂಸತಿ ಇದೆ. ಇದು ಜನ ಸಾಮಾನ್ಯರು ಮಾತನಾಡುವ ನುಡಿ. ಆದರೆ, ದೆವ್ವಗಳು, ಪಿಶಾಚಿಗಳ ಭಾಷೆಯು ತಮಿಳು ಆಗಿದೆ. ಅಂಧಾಭಿಮಾನದಲ್ಲಿ ಅನ್ಯ ಭಾಷೆಗಳನ್ನು ನಿಂದಿಸುವಂತಹುದು ಸರಿಯಲ್ಲ. ಮೊದಲಿನಿಂದಲೂ ಕೆಲ ತಮಿಳುಗರು ಭಾಷಾ ಸೌಹಾರ್ದತೆಯನ್ನು ಹಾಳೆಗೆಡುವುತ್ತಿದ್ದಾರೆ. ಇಂತಹವರಿಗೆ ಪಾಠ ಕಲಿಸಬೇಕಾಗಿದೆ ಎಂದು ಕಿಡಿಕಾರಿದರು.  
ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ನಗರಾಧ್ಯಕ್ಷ ಶ್ರವಣ್ ಕುಮಾರ್, ತಾಲೂಕು ಉಪಾಧ್ಯಕ್ಷ ಶ್ರೀಧರ್, ಕಾನೂನು ಸಲಹೆಗಾರ ಉದಯ್ ಶಂಕರ್, ಪದಾಧಿಕಾರಿಗಳಾದ ವಿಜಯ್ ಕುಮಾರ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net