ಇದೆಲ್ಲವೂ ಅವರ ಶ್ರಮವೇ! ರಿಷಬ್​ ಶೆಟ್ಟಿಯಿಂದ ಕಲಿಯುವುದು ಬಹಳ ಇದೆ: 'ಕಾಂತಾರ' ಶಿವ ಬಗ್ಗೆ ಜಯರಾಂ ಗುಣಗಾನ | Kantara Chapter 1

ವಿಜಯವಾಣಿ (25)
Published on

Kantara Chapter 1: ಜಾಗತಿಕವಾಗಿ ತೆರೆಕಂಡ 'ಕಾಂತಾರ ಚಾಪ್ಟರ್​ 1' ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್‌ ಸೇರಿದ್ದು, ಇದೀಗ 200 ಕೋಟಿ ರೂ. ಕ್ಲಬ್​ಗೆ ಸನ್ನಿಹಿತವಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಸೌತ್​ ಬ್ಯೂಟಿ ರುಕ್ಮಿಣಿ ವಸಂತ್​, ಬಾಲಿವುಡ್​ ಗುಲ್ಶನ್​ ದೇವಯ್ಯ, ಮಾಲಿವುಡ್​ನ ಜಯರಾಂ ಸೇರಿದಂತೆ ಸ್ಟಾರ್​ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಪ್ರಸ್ತುತ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ'ಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ, ಮನ್ನಣೆ ಲಭಿಸುತ್ತಿದೆ. ಸಿನಿಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿರುವ ರಿಷಬ್​ ಶೆಟ್ಟಿ ಕುರಿತು ಇದೀಗ ಜಯರಾಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳರಿ ಪಯಟ್ಟು ಕಲಿಕೆ, ಜಿಮ್​...

'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಾಜಶೇಖರ ಪಾತ್ರದಲ್ಲಿ ಮಿಂಚಿದ ಮಾಲಿವುಡ್​ ಹಿರಿಯ ನಟ ಜಯರಾಂ, ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿ, "ನನಗೆ ಅನಿಸೋದು ಆತ (ರಿಷಬ್​ ಶೆಟ್ಟಿ) ಕಳೆದ ಮೂರು ವರ್ಷಗಳಿಂದ ಸರಿಯಾಗಿ ನಿದ್ರೆಯೇ ಮಾಡಿಲ್ಲ ಎಂದು. ತನ್ನ ಕುಟುಂಬದ ಸಮೇತ ಕುಂದಾಪುರಕ್ಕೆ ಬಂದಿರುವ ರಿಷಬ್​, ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು. ಏಕಕಾಲಕ್ಕೆ ನಿರ್ದೇಶನ ಮತ್ತು ಅಭಿನಯ ಮಾಡಬೇಕು. ಇದರ ನಡುವೆ, ಕಳರಿ ಪಯಟ್ಟು ಕಲಿಕೆ, ಜಿಮ್​. ಇನ್ನು ಏನ್ನಿಲ್ಲ ಹೇಳಿ? ಇವೇ ಇಂದಿನ ಸಕ್ಸಸ್​ಗೆ ಬಲವಾದ ಕಾರಣ" ಎಂದಿದ್ದಾರೆ.

"ಸಿನಿಮಾ ಇಂದು ಗೆದ್ದಿದೆ ಎಂದರೆ ಅದರ ಹಿಂದೆ ಅವರು ನಡೆಸಿದ ಪೂರ್ವತಯಾರಿ ಮತ್ತು ಪರಿಶ್ರಮ. ರಿಷಬ್ ಶೆಟ್ಟಿ ಅವರಿಂದ ಕಲಿಯುವುದು ತುಂಬಾನೇ ಇದೆ. ಮೊದಲು ಬಂದ ಕಾಂತಾರ ಚಿತ್ರಕ್ಕೆ ನಾನೂ ಕೂಡ ಒಬ್ಬ ಅಭಿಮಾನಿ. ಅವರು ನನ್ನನ್ನು ಸಂಪರ್ಕಿಸಿ, ನನ್ನೊಂದಿಗೆ ಮಾತುಕತೆ ನಡೆಸಿ, ಕಾಸರಗೋಡಿನಲ್ಲಿ ಕಳೆದ ದಿನಗಳನ್ನು ಹಂಚಿಕೊಂಡರು. ಚಿತ್ರದಲ್ಲಿನ ಪಾತ್ರಗಳನ್ನು ಬಹಳ ಸೂಕ್ಷ್ಮವಾಗಿ ವಿವರಿಸಿದರು. ಈ ಪಾತ್ರಕ್ಕೆ ನಾನೇ ಏಕೆ? ಎಂದು ಅವರನ್ನು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ರಿಷಬ್, ಪಾತ್ರದಲ್ಲಿನ ವಿಭಿನ್ನತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಆಗ ಅನಿಸಿತು ಇದೊಂದು ಬಲವಾದ ಪಾತ್ರ ಅಂತ" ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಹೋಂ ವರ್ಕ್​ ಹೆಚ್ಚಿದೆ!

"ತುಂಬ ಜನಕ್ಕೆ ನಾನು ಮಲಯಾಳಂ ಹೊರತುಪಡಿಸಿ ಇತರೆ ಚಿತ್ರಗಳಲ್ಲಿ ಮಾಡುವ ಪಾತ್ರಗಳು ಅಷ್ಟಾಗಿ ಇಷ್ಟವಾಗುವುದಿಲ್ಲ. ಆದರೆ, ಆಗಾಗ್ಗೆ ಏನಾಗುತ್ತದೆ ಎಂದರೆ, ಕೆಲವು ಚಿತ್ರಗಳು 2ರಿಂದ 3 ವರ್ಷಗಳ ಅವಧಿಯಲ್ಲಿ ಚಿತ್ರೀಕರಣಗೊಳ್ಳುತ್ತವೆ. ಅವುಗಳ ರನ್​ ಟೈಮ್​ 5ರಿಂದ 6 ಗಂಟೆಗಳವರೆಗೆ ಇರುತ್ತವೆ. ಅಂತಿಮವಾಗಿ, ಚಿತ್ರತಂಡ ಅದನ್ನು 3 ಗಂಟೆ ಅಥವಾ ಅದಕ್ಕಿಂತ ಕಡಿಮೆಗೆ ಇಳಿಸಲು ಮುಂದಾಗುತ್ತದೆ. ಆಗ ನಮ್ಮ ಪಾತ್ರಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಆದರೆ, ಕಾಂತಾರದಲ್ಲಿ ಆ ರೀತಿ ಆಗಲಿಲ್ಲ. ಕಾರಣ, ಈ ಸಿನಿಮಾವನ್ನು ಸಾಕಷ್ಟು ಸಂಶೋಧನೆ ಮತ್ತು ಹೋಂವರ್ಕ್​ ಮಾಡಿದ ಬಳಿಕವೇ ಮಾಡಲಾಗಿದೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net