

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
- ಬಹುತಾರಾಗಣದಲ್ಲಿ ನಟಿಸಬೇಕು ಅಂದರೆ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು ಜತೆಗೆ ನಿರ್ದೇಶಕರ ಮೇಲೆ ಭರವಸೆ ಇರಬೇಕು. ಅದೆರಡೂ ಇದ್ದರೆ ಏನೂ ಸಮಸ್ಯೆ ಇಲ್ಲ. ಎಲ್ಲ ಪಾತ್ರಗಳಿಗೂ ಸಮಾನವಾಗಿ ಪ್ರಾಮುಖ್ಯತೆ ನೀಡುವುದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ, ‘ಪೊನ್ನಿಯಿನ್ ಸೆಲ್ವನ್’ ಸರಣಿಯಲ್ಲಿ ಮಣಿರತ್ನಂ ಸರ್ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ. ಜತೆಗಿರುವ ಕಲಾವಿದರು ಹೇಗೆ ನಟಿಸುತ್ತಾರೆ ಎಂಬುದನ್ನು ನೋಡಿ ಕಲಿಯಬಹುದು. ಆ ಮೂಲಕ ನಮಗೆ ಗೊತ್ತಿಲ್ಲದೆಯೇ ನಾವು ಮಾಡುವ ತಪು್ಪಗಳು ಕಡಿಮೆಯಾಗುತ್ತವೆ.
- ಪಾತ್ರಕ್ಕಾಗಿ ಯಾರನ್ನೂ ಕಾಪಿ ಮಾಡಲು ನನಗೆ ಇಷ್ಟವಿರಲಿಲ್ಲ. ರಾಜ ರಾಜ ಚೋಳನ ಪಾತ್ರದಲ್ಲಿ ಶಿವಾಜಿ ಗಣೇಶನ್ ಸರ್ ನಟಿಸಿದ್ದರು. ನಾನು ಅವರ ಶೇಕಡಾ 10ರಷ್ಟು ನಟಿಸಿದ್ದೇನಾ ಗೊತ್ತಿಲ್ಲ. ಆದರೆ, ಬೇರೆ ಪಾತ್ರಗಳನ್ನು ಕಾಪಿ ಮಾಡಬಾರದು ಅಂತ ನಾನು ಅವರ ಸಿನಿಮಾ ಕೂಡ ನೋಡಲಿಲ್ಲ.
- ಇದುವರೆಗೆ 27 ಚಿತ್ರಗಳಲ್ಲಿ ನಟಿಸಿದ್ದೇನೆ. ‘ಪಿಎಸ್ 2’ 28ನೇ ಸಿನಿಮಾ. ಸದ್ಯ ‘ಸೈರನ್’ ಚಿತ್ರಕ್ಕಾಗಿ ಹೊಸ ಲುಕ್ನಲ್ಲಿದ್ದೇನೆ. ಇನ್ನು 10 ದಿನಗಳ ಚಿತ್ರೀಕರಣ ಬಾಕಿಯಿದೆ. ಸದ್ಯ ‘ಪಿಎಸ್ 2’ ಪ್ರಚಾರದಲ್ಲಿ ಬಿಜಿಯಿರುವ ಕಾರಣ, ಸಿನಿಮಾ ರಿಲೀಸ್ ಬಳಿಕ ‘ಸೈರನ್’ ಚಿತ್ರೀಕರಣ ನಡೆಯಲಿದೆ. ಆ ನಂತರ ನಯನತಾರಾ ಜತೆ ‘ಇರೈವಾನ್’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದೇನೆ. ‘ತನಿ ಒರುವನ್ 2’ ಕಥೆ ಕೇಳಿದ್ದೇನೆ. ಚೆನ್ನಾಗಿದೆ. ಅಧಿಕೃತವಾಗಿ ಘೋಷಣೆಯಾಗಬೇಕಿದೆ.
- ನಾನು ಆಗಾಗ ಬೆಂಗಳೂರಿಗೆ ಬರುತ್ತಿರುತ್ತೇನೆ. ಕಾಲೇಜು ದಿನಗಳಲ್ಲಿ ಕೆಲವು ಗೆಳೆಯರು ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡಿದ್ದರು. ಆಗ ಬರುತ್ತಿದ್ದೆ. ಎಲ್ಲರೂ ಬೆಂಗಳೂರು ಸುತ್ತುತ್ತಿದ್ದೆವು. ಚಿತ್ರೀಕರಣಕ್ಕೂ ಇಲ್ಲಿಗೆ ಹಲವು ಬಾರಿ ಬಂದಿದ್ದೇನೆ. ಚೆನ್ನೈನಲ್ಲಿ ರಸ್ತೆ, ಮೇಲ್ಸೇತುವೆಗಳ ಮೇಲೆ ಚಿತ್ರೀಕರಣಕ್ಕೆ ಅವಕಾಶ ಸಿಗುವುದಿಲ್ಲ. ಅಂತಹ ಸೀನ್ಗಳನ್ನು ನಾವು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತೇವೆ. ಇಲ್ಲಿನ ವಾತಾವರಣ, ಜನ ಸೂಪರ್.
- ಕನ್ನಡದ ನಟರನ್ನೂ ಆಗಾಗ ಭೇಟಿಯಾಗುತ್ತಿರುತ್ತೇನೆ. ಕಿಚ್ಚ ಸುದೀಪ್ ಸರ್ ಹೊಸಬರನ್ನು ಹುರಿದುಂಬಿಸುತ್ತಾರೆ. ಸಿಸಿಎಲ್ ಸಮಯದಲ್ಲಿ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಇನ್ನು ಚಿರಂಜೀವಿ ಸರ್ ಮಗಳ ಮದುವೆಯಲ್ಲಿ ಶಿವಣ್ಣ ಭೇಟಿಯಾಗಿದ್ದೆ. ಅವರು ಮನೆಗೆ ಕರೆದಿದ್ದರು. ಕೆಲವು ತಿಂಗಳ ಹಿಂದೆ ಚೆನ್ನೈನಲ್ಲಿ ಯಶ್ ಭೇಟಿಯಾಗಿದ್ದೆ.
- ಅವಕಾಶ ಸಿಕ್ಕರೆ ಖಂಡಿತವಾಗಿ ಕನ್ನಡ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರದಲ್ಲಿ ತಮಿಳು ನಟನಾಗಿಯೇ ಅತಿಥಿ ಪಾತ್ರದಲ್ಲಿ ನಟಿಸುವ ಆಫರ್ ಬಂದಿತ್ತು. ಆದರೆ, ಆಗ ತಮಿಳು ಚಿತ್ರದಲ್ಲಿ ಬಿಜಿಯಿದ್ದ ಕಾರಣ, ನಟಿಸಲು ಸಾಧ್ಯವಾಗಿರಲಿಲ್ಲ.