

Hema Malini : ಬಿ.ರ್ ಚೋಪ್ರಾ ನಿರ್ದೇಶನದ ಮಹಾಭಾರತ ಚಿತ್ರದಲ್ಲಿ ಕರ್ಣನ ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಪಂಕಜ್ ಧೀರ್ ಅವರ ನಿಧನದ ನಂತರ, ನಟಿ ಹೇಮಾ ಮಾಲಿನ ತಮ್ಮ ದುಃಖವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 15 ರಂದು ನಡೆದ ಅಂತ್ಯಕ್ರಿಯೆಯಲ್ಲಿ ಸಲ್ಮಾನ್ ಖಾನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಚಿತ್ರೋದ್ಯಮದ ತಾರಾಬಳಗವೇ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಅವರ ಉಪಸ್ಥಿತಿಯು ಧೀರ್ ಅವರ ಉದ್ಯಮದಲ್ಲಿ ಇದ್ದಂತಹ ಗೌರವ ಹಾಗೂ ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ. ಈ ವೇಳೆ ಹೇಮಾ ಮಾಲಿನಿ ಕೂಡಾ ಭಾಗಿಯಾಗಿದ್ದರು.
ನಿನ್ನೆ ನಾನು ನನ್ನ ಜೀವದ ಗೆಳೆಯನನ್ನು ಕಳೆದುಕೊಂಡಿದ್ದೇನೆ ಮತ್ತು ಸಂಪೂರ್ಣವಾಗಿ ಆಶ್ಚರ್ಯಗೊಂಡಿದ್ದೇನೆ. ಎಲ್ಲರೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತಿದ್ದ, ಮಹಾಭಾರತದಲ್ಲಿ ಕರ್ಣನ ಪಾತ್ರದ ಮೂಲಕ ಜನರ ಹೃದಯವನ್ನು ಗೆದ್ದ ಪ್ರತಿಭಾನ್ವಿತ ನಟ ಪಂಕಜ್ ಧೀರ್ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ನೊಂದಿಗೆ ಕಠಿಣ ಹೋರಾಟದ ನಂತರ ಇವರು ನಿಧನರಾದರು. ಈ ಮಾರಣಾಂತಿಕ ಕಾಯಿಲೆಯಿಂದ ಜಯಿಸಲು ಅವರು ದೃಢನಿಶ್ಚಯ ಮಾಡಿದ್ದರು ಎಂದು ಹೇಮಾ ಮಾಲಿನಿ ಬರೆದಿದ್ದಾರೆ.
ಪಂಕಜ್ ಯಾವಾಗಲೂ ನನ್ನ ಪಕ್ಕದಲ್ಲಿ ನಿಂತು ಬೆಂಬಲ ನೀಡುವ ಮತ್ತು ಪ್ರೋತ್ಸಾಹಿಸುವ ಸ್ನೇಹಿತರಾಗಿದ್ದರು. ನಾನು ಏನೇ ಮಾಡಿದರೂ ಪ್ರೋತ್ಸಾಹಿಸುತ್ತಿದ್ದರು. ನನ್ನ ಜೀವನದಲ್ಲಿ ಅವರ ಬೆಂಬಲ ಮತ್ತು ಉಪಸ್ಥಿತಿಯನ್ನು ನಾನು ಕಳೆದುಕೊಳ್ಳುತ್ತೇನೆ ಅವರ ಪ್ರೀತಿಯ ಪತ್ನಿ ಅನಿತಾ ಜಿ ಅವರ ಜೀವನದ ಬೆಳಕಾಗಿದ್ದಕ್ಕಾಗಿ ನನ್ನ ಹೃದಯವು ದುಃಖಿತವಾಗಿದೆ ಎಂದು ಭಾವನಾತ್ಮಕವಾಗಿ ಬರೆದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
1980 ರ ದಶಕದ ಮಹಾಭಾರತದ ದೂರದರ್ಶನ ರೂಪಾಂತರದಲ್ಲಿ ಪಂಕಜ್ ಧೀರ್ ಅವರ ಕರ್ಣನ ಪಾತ್ರವು ಅವರ ಪರಂಪರೆಯ ಮಹತ್ವದ ಭಾಗವಾಗಿ ಉಳಿದಿದೆ. ಇವರ ಅಭಿನಯನವನ್ನು ವ್ಯಾಪಕವಾಗಿ ಪ್ರಶಂಸಿಸಲಾಯಿತು ಮತ್ತು ಕಾರ್ಯಕ್ರಮದ ಮೂಲ ಪ್ರಸಾರದ ದಶಕಗಳ ನಂತರವೂ ಪ್ರೇಕ್ಷಕರು ಇವರನ್ನು ನೆನಪಿಸಿಕೊಳ್ಳುತ್ತಾರೆ.
ಈ ಹಿಂದೆ ಧೀರ್ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಈ ರೋಗವು ಮತ್ತೆ ಮರುಕಳಿಸಿದ್ದರಿಂದ ಅವರ ಸಾವಿಗೆ ಕಾರಣವಾಯಿತು. ಅವರ ಅನಾರೋಗ್ಯದ ಉದ್ದಕ್ಕೂ, ಅವರು ದೃಢನಿಶ್ಚಯದಿಂದ ಇದ್ದರು ಮತ್ತು ಸಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸಿದರು ಎಂದು ಅವರ ಆಪ್ತರು ತಿಳಿಸಿದ್ದಾರೆ. (ಏಜೆನ್ಸೀಸ್)