ಗೋವಿಂದ ಹೊಸ ರೂಪ!: ಏಳು ವರ್ಷ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ಬಾಲಿವುಡ್ ದಿಗ್ಗಜ

ನಟ ಗೋವಿಂದ
ನಟ ಗೋವಿಂದ
Published on

ಪ್ರಮುಖ ಮುಖ್ಯಾಂಶಗಳು

  • ಏಳು ವರ್ಷಗಳ ಬಳಿಕ ಹಿಂದಿ ಚಿತ್ರರಂಗದಲ್ಲಿ ಗೋವಿಂದ
  • ರೂಪ ಚಿತ್ರದಲ್ಲಿ ನಟನೆ ಜತೆಗೆ ನಿರ್ಮಾಣದ ಹೊಣೆ ಹೊತ್ತ ಹಿರಿಯ ನಟ
  • ಯಾರೂ ಊಹಿಸದ ರೀತಿಯಲ್ಲಿ ರೂಪ ಮೂಡಿಬರಲಿದೆ ಎಂದ ಭರವಸೆ ವ್ಯಕ್ತಪಡಿಸಿದ ನಟ
ಹಿಂದಿ ಚಿತ್ರರಂಗದ 80, 90ರ ದಶಕದ ಸೂಪರ್ ಸ್ಟಾರ್‌ಆಗಿ ಮಿಂಚಿದವರಲ್ಲಿ ಗೋವಿಂದ ಕೂಡ ಓರ್ವರು. ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಅವರು ಸುಮಾರು 120ಕ್ಕೂ ಅಧಿಕ ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಡಾನ್ಸ್ ಮತ್ತು ಕಾಮಿಡಿ ಟೈಮಿಂಗ್‌ಅನ್ನು ಈಗಲೂ ಹಲವು ನಟರು ಫಾಲೋ ಮಾಡುತ್ತಾರೆ. ಇಂತಹ ಅಪರೂಪದ ಪ್ರತಿಭೆ ಗೋವಿಂದ ಕಳೆದ ಏಳು ವರ್ಷಗಳಿಂದ ಬಾಲಿವುಡ್‌ನಿಂದ ದೂರವಾಗಿದ್ದರು. 2019ರಲ್ಲಿ ತೆರೆಕಂಡ ‘ರಂಗೀಲಾ ರಾಜಾ’ ಅವರು ನಟಿಸಿದ್ದ ಕೊನೆಯ ಸಿನಿಮಾ. ಬಳಿಕ ಯಾವ ಚಿತ್ರದಲ್ಲಿ ನಟಿಸಿಲ್ಲವಾದರೂ, ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅವರು ‘ರೂಪ’ ಎಂಬ ಹೊಸ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಗೋವಿಂದ ಮುಖ್ಯಭೂಮಿಕೆಯಲ್ಲಿ ನಟಿಸುವ ಜತೆಗೆ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಹೊಸ ಪ್ರತಿಭೆ ರಾಣಿ ಸ್ವರ್ಣಾಕರ್ ನಾಯಕಿಯಾಗಿದ್ದಾರೆ. ಬಾಲಿವುಡ್‌ಗೆ ಮರಳುವ ಖುಷಿಯಲ್ಲಿ ಗೋವಿಂದ, ‘ಹಲವರು ನಾನು ಮತ್ತೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಆಡಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿದೆ. ಇದೀಗ ನಾನು ಮತ್ತೆ ಹೊಸದಾಗಿ ವೃತ್ತಿಜೀವನ ಆರಂಭಿಸುತ್ತಿದ್ದೇನೆ. ಯಾರೂ ಊಹಿಸದ ರೀತಿಯಲ್ಲಿ ‘ರೂಪ’ ಸಿನಿಮಾ ಮೂಡಿಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಇದು ಯುವಜನಾಂಗಕ್ಕೆ ಆಪ್ತವಾಗುವ ಕಥೆ’ ಎಂದು ಹೇಳಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ನಡುವೆ ವಿರಸ ಮೂಡಿದ್ದು, ಬೇರೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಪರಸ್ಪರ ಸೌಹಾರ್ದದಿಂದ ಸಮಸ್ಯೆ ಪರಿಹರಿಸಿಕೊಂಡು ಮತ್ತೆ ಒಂದಾಗುವ ಮೂಲಕ ಎಲ್ಲ ಗಾಳಿಸುದ್ದಿಗೆ ತೆರೆ ಎಳೆದಿದ್ದರು.-ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net