ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟ ಅನಿರುದ್ಧ್…

WhatsApp Image 2022-12-07 at 10.35.51 PM
Published on

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಎರಡು ತಿಂಗಳ ಹಿಂದೆಯಷ್ಟೇ ವಿವಾದಕ್ಕೆ ಸಿಲುಕಿತ್ತು. ಸೀರಿಯಲ್‌ನ ಪ್ರಮುಖ ಪಾತ್ರ ‘ಆರ್ಯವರ್ಧನ್’ ಆಗಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಜತ್ಕರ್ ಹಾಗೂ ನಿರ್ದೇಶಕ- ನಿರ್ಮಾಪಕ ಆರೂರು ಜಗದೀಶ್ ಮಧ್ಯೆ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಅನಿರುದ್ಧ ಜತ್ಕರ್ ವಿರುದ್ಧ ಆರೂರು ಜಗದೀಶ್ ಆರೋಪಗಳನ್ನ ಮಾಡಿದ್ದರು. ಎಲ್ಲಾ ಆರೋಪಗಳಿಗೆ ಅನಿರುದ್ಧ ಜತ್ಕರ್ ತಿರುಗೇಟು ನೀಡಿದ್ದರು. ಇದರಿಂದಾಗಿ ಸೀರಿಯಲ್‌ನಿಂದ ಅನಿರುದ್ಧ ಜತ್ಕರ್ ಅವರನ್ನು ಕೈಬಿಡಲಾಗಿತ್ತು ಎಂಬ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆ ಸಂದರ್ಭದಲ್ಲಿ ಅನಿರುದ್ಧ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿತ್ತು. ತಮ್ಮ ನೆಚ್ಚಿನ ನಟನನ್ನು ಕೈಬಿಟ್ಟಿದ್ದಕ್ಕೆ ಕೆಲವರು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸ್ವತಃ ನಟ ಅನಿರುದ್ಧ ಅವರೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಸದ್ಯದಲ್ಲೇ ತಾವು ಮತ್ತೆ ಕಿರುತೆರೆ ಮೇಲೆ ಕಾಣಿಸಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದ್ದಾರೆ.

ಅವರು ಏನು ಬರೆದಿದ್ದಾರೆ ಎಂಬುದು ಇಲ್ಲಿದೆ ನೋಡಿ. ‘‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ಸೂರ್ಯವಂಶ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ.’’ಈ ಪೋಸ್ಟ್ ಜತೆ ಅನಿರುದ್ಧ ಅವರು ತಾವು ಮತ್ತು ಎಸ್ ನಾರಾಯಣ್ ಅವರಿರುವ ಫೋಟೋಗಳನ್ನು ಕೂಡ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net