

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬಾತನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ನಟ ಧ್ರುವ ಸರ್ಜಾಗೆ ಆಪ್ತರಾಗಿರುವ ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ ನಡೆಸಲು ಈತ ಕೂಡ ಕಾರಣ ಎಂಬ ವಿಚಾರ ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಅಶ್ವಿನ್‌ನನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ ೨೬ ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರು ದಾಖಲಿಸಿದ ಬಳಿಕ ಅವರಿಬ್ಬರನ್ನು ಬಂಧನ ಮಾಡಲಾಗಿತ್ತು. ಇದೀಗ ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂದು ತಿಳಿದುಬಂದಿದೆ.
ಬಂಧಿತ ಅಶ್ವಿನ್ ಹಲವು ವರ್ಷಗಳಿಂದ ನಟ ಧೃವ ಸರ್ಜಾ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಜಿಮ್ ಟ್ರೈನರ್ ಆಗಿದ್ದು, ನಟ ಧೃವ ಸರ್ಜಾ ಅವರಿಗೆ ಇತ್ತೀಚಿಗೆ ಹತ್ತಿರವಾಗಿದ್ದ. ಜಿಮ್ ವಿಚಾರದಲ್ಲಿ ಧೃವ ಸರ್ಜಾ ಅವರನ್ನು ಕೇರ್ ಮಾಡುತ್ತಿದ್ದ. ಹೀಗಾಗಿ ಸಹಜವಾಗಿಯೇ ನಟ ಧೃವ ಸರ್ಜಾಗೆ ಪ್ರಶಾಂತ್ ಪೂಜಾರಿ ಆತ್ಮೀಯನಾಗಿದ್ದ.
ಧೃವ ಸರ್ಜಾಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಸರ್ಪೈಸ್ ಆಗಿ ಗ್‌ಟಿ ಕೊಟ್ಟಿದ್ದರು. ಇದು ಮ್ಯಾನೇಜರ್ ಅಶ್ವಿನ್ ಹಾಗೂ ಆತನ ಆಪ್ತ ವಲಯಕ್ಕೆ ಸಹಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೃವ ಸರ್ಜಾ ಜತೆಗಿನ ಆತ್ಮೀಯತೆಯನ್ನು ಹೇಗಾದರೂ ಮುರಿಯಬೇಕು ಎಂದು ನಿರ್ಧರಿಸಿ ನಟ ಧೃವ ಸರ್ಜಾ ಕಾರು ಚಾಲಕನ ಜತೆ ಸೇರಿ ಪ್ಲಾನ್ ಮಾಡಿ ಕನಕಪುರದ ಇಬ್ಬರು ಹುಡುಗರನ್ನು ಬಿಟ್ಟು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು. ಈ ಮೊದಲು ಡ್ರೈವರ್ ನಾಗೇಂದ್ರನೇ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿತ್ತು. ಆದರೆ ಆತನ ಜತೆ ಅಶ್ವಿನ್ ಕೂಡ ಇರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.