

ಗುಂಡ್ಲುಪೇಟೆ: ಬಜಾರ್ ಚಿತ್ರದ ನಾಯಕ ಧನ್ವೀರ್ ಅರಣ್ಯದಲ್ಲಿ ರಾತ್ರಿವೇಳೆ ಸಫಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿಮಾ ನಟರಿಗೊಂದು-ಜನ ಸಾಮಾನ್ಯರಿಗೊಂದು ರೂಲ್ಸ್ ಇದೆಯಾ? ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ರಾತ್ರಿ ಸಫಾರಿಗೆ ಅವಕಾಶ ಇಲ್ಲ. ಆದರೂ ಆ ವೇಳೆ ಜೀಪ್ ನಲ್ಲಿ ಕಾಡು ಸುತ್ತಿರುವ ನಟ ಧನ್ವೀರ್ ಹುಲಿ ಕಂಡು ಸಂಭ್ರಮಿಸಿರುವುದು ವಿಡಿಯೋದಲ್ಲಿದೆ. ಈ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ ಧನ್ವೀರ್ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟ ಸಫಾರಿ ನಡೆಸಿರುವ ಪ್ರದೇಶವನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶವೆಂದು ಹೇಳಲಾಗುತ್ತಿದೆ.
ಈ ಬಗ್ಗೆ 'ವಿಜಯವಾಣಿ'ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಚಿತ್ರನಟ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ ಸಫಾರಿ ನಡೆಸಿರುವುದು ನಿಜವಾದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಮತ್ತು ಪೊಲೀಸರಿಗೂ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.