

ಬೆಂಗಳೂರು: ನಿರ್ದೇಶಕ, ಬರಹಗಾರ, ವಿಕಟಕವಿ ಎಂದೇ ಖ್ಯಾತರಾದ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಒಂದೊಂದು ಕುತೂಹಲಕಾರಿ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಕೌತುಕವನ್ನು ಹೆಚ್ಚಿಸಿದೆ. ಇತ್ತೀಚೆಗೆ ನಿರ್ದೇಶಕರು ಹೊರಡಿಸಿದ ಅಧಿಕೃತ ಮಾಹಿತಿಯ ಅನುಸಾರ ಸಿನಿಮಾದ ಟ್ರೇಲರ್ ಶೀಘ್ರವೇ ಅನಾವರಣಗೊಳ್ಳಲು ಸಜ್ಜಾಗಿದೆ.
ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಗರಡಿ' ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಸಂಪೂರ್ಣವಾಗಿ ಮುಗಿದಿದೆ. ಸಿನಿಮಾದಲ್ಲಿ ಯಶಸ್ ಸೂರ್ಯ ಮತ್ತು ಸೋನಾಲ್ ಮೊಂಟೇರೊ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಯೋಗರಾಜ್ ಹಾಗೂ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.
ಕುಸ್ತಿ ಕಥೆಯನ್ನು ಒಳಗೊಂಡ ಈ ಸಿನಿಮಾ ಇದೇ ನವೆಂಬರ್ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಅಧಿಕೃತ ಟ್ರೇಲರ್ ಅನ್ನು ನವೆಂಬರ್ 01 ಕನ್ನಡ ರಾಜ್ಯೋತ್ಸವದಂದು ನಟ ದರ್ಶನ್ ಅವರು ರಾಣೆಬೆನ್ನೂರಿನಲ್ಲಿ ರಿಲೀಸ್ ಮಾಡಲಿದ್ದಾರೆ ಎಂದು ಖುದ್ದಾಗಿ ಪೋಸ್ಟರ್ ಮೂಲಕ ಯೋಗರಾಜ್ ಭಟ್ ಘೋಷಿಸಿದ್ದಾರೆ. ಗರಡಿ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.