

ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಕೊಲೆ ಪ್ರಕರಣವೊಂದರಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದು, ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ರನ್ನು ಬಂಧಿಸಿದ್ದಾರೆ. ಇದಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಸದ್ಯ ಠಾಣೆಯಲ್ಲಿ ಪೊಲೀಸರ ವಿಚಾರಣೆಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರನೊಂದಿಗೆ ಮಾತನಾಡಬೇಕು ಎಂದು ಮನವಿ ಮಾಡಿದರು. ಇದನ್ನು ಆಲಿಸಿದ ಅಧಿಕಾರಿಗಳು, ದೂರವಾಣಿ ಕರೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ವೇಳೆ ನಾನೇನು ತಪ್ಪು ಮಾಡಿಲ್ಲ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಹೇಳಿದ್ದಾರೆ. ಅವರೊಟ್ಟಿಗೆ ಕೆಲ ಸಮಯ ಪುತ್ರ ವಿನೀಶ್ ಜತೆಗೂ ಮಾತನಾಡಿದ್ದಾರೆ.
ದರ್ಶನ್ ಸೇರಿ ಒಟ್ಟು 13 ಆರೋಪಿಗಳನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಿರುವ ಪೊಲೀಸರು, ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.