

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ರೆಗ್ಯೂಲರ್ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ (Darshan) ಸದ್ಯ ಫ್ಯಾಮಿಲಿಯೊಂದಿಗೆ ಕಾಲ ಕಳೆಯುತ್ತಿದ್ದು, ಈಚೆಗೆ ಕುಟುಂಬಸ್ಥರೊಂದಿಗೆ ತಮ್ಮ ಫಾರ್ಮ್ಹೌಸ್ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಆ ಬಳಿಕ ಉಕ್ಕಡದ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದರು.
ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ಗೆ (Darshan) ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ದರ್ಶನ್ ಅವರ ಬಳಿ ಇರುವ ಗನ್ ಲೈಸೆನ್ಸ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗನ್ ಲೈಸೆನ್ಸ್ ರದ್ದುಪಡಿಸುವ ಸಂಬಂಧ ಪೊಲೀಸರು ಜನವರಿ 07ರಂದು ನಟ ದರ್ಶನ್ಗೆ ನೋಟಿಸ್ ನೀಡಿದ್ದರು. ಇದೀಗ ನೋಟಿಸ್ಗೆ ಉತ್ತರಿಸಿರುವ ನಟ ದರ್ಶನ್ ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗೆ ಗನ್ ಬೇಕಾಗುತ್ತದೆ. ನನಗೆ ಗನ್ ಬೇಕು, ಪರವಾನಗಿ ರದ್ದು ಮಾಡಬೇಡಿ ಎಂದು ಪೊಲೀಸರು ನೀಡಿದ್ದ ನೋಟಿಸ್ಗೆ ಪತ್ರದ ಮೂಲಕ ಉತ್ತರಿಸಿದ್ದಾರೆ.
ನೀವು ಕೊಲೆ ಪ್ರಕರಣದ ಆರೋಪಿ ಆಗಿದ್ದೀರಿ, ಜಾಮೀನಿನ ಮೇಲೆ ಹೊರಗಿರುವ ಕಾರಣ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದುಪಡಿಸಬೇಕಾಗಿದೆ ಎಂದು ಪೊಲೀಸರು ನಟ ದರ್ಶನ್ಗೆ ನೀಡಿದ್ದ ನೋಟಿಸ್ನಲ್ಲಿ ನೀಡಿದ್ದರು. ಇದೀಗ ಇದಕ್ಕೆ ನಟ ದರ್ಶನ್ (Darshan) ಪತ್ರದ ನಮೂಲಕ ಪ್ರತಿಕ್ರಿಯಿಸಿ, ಗನ್ ಪರವಾನಗಿ ರದ್ದುಪಡಿಸಬೇಡಿ ಎಂದು ಮನವಿ ಮಾಡಿದ್ದಾರೆ.