

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ (Saif Ali Khan) ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದಿದ್ದು, ಸದ್ಯ ನಟ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಘಟನೆಯ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದೆ.
ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ (Saif Ali Khan) ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದ್ದು, ಮೊದಲಿಗೆ ಸೈಫ್ ಅಲಿ ಖಾನ್ ಅವರ ಮನೆ ಕೆಲಸದವರ ಮೇಲೆ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಸೈಫ್ ಅವರಿಗೆ ದುಷ್ಕರ್ಮಿ ದೇಹದ ಆರು ಕಡೆ ಚಾಕುವಿನಿಂದ ಇರಿದಿದ್ದು, ಬಳಿಕ ಆತ ಎಸ್ಕೇಪ್ ಆಗಿದ್ದಾನೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ದುಷ್ಕರ್ಮಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ದು, ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇನ್ನೂ ನಟ ಸೈಫ್ ಅಲಿ ಖಾನ್ (Saif Ali Khan) ಅವರು ವಾಸಿಸುತ್ತಿರುವ ನಿವಾಸದ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸದಾ ಬಿಗಿಭದ್ರೆತಯನ್ನು ಒದಗಿಸಲಾಗಿರುತ್ತದೆ. ಇದೆಲ್ಲದರ ಹೊರತಾಗಿಯೂ ನಟನ ಮನೆಗೆ ಕಳ್ಳ ನುಗ್ಗಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು, ನಟನ ಮೇಲಿನ ಅಟ್ಯಾಕ್ಗೆ ಒಳಗಿನವರು ಕೈ ಜೋಡಿಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಆರೋಪಿ ಘಟನೆಗೂ ಎರಡು ಗಂಟೆಗಳ ಮುನ್ನ ನಟ ಸೈಫ್ ಅವರ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದು, ಇದು ಮುಂಚಿತವಾಗಿಯೇ ಪ್ಲಾನ್ ಮಾಡಲಾಗಿತ್ತಾ ಎಂಬ ಅನುಮಾವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ನಟನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಶಂಕೆಯ ಮೇರೆಗೆ ಮೂವರನ್ನು ವಶಕ್ಕೆ ಪಡೆದಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮನೆಕೆಲಸದಾಕೆಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಅಲ್ಲದೇ ಸಿಸಿಟವಿಯಲ್ಲಿ ಸೆರೆಯಾಗಿರುವ ಪ್ರಕಾರ ಹೊರಗಡೆಯಿಂದ ಯಾರು ಮನೆ ಪ್ರವೇಶಿಸದಿರುವುದು ಕಂಡು ಬಂದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.
ನಡೆದಿದ್ದೇನು?: ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಕಳ್ಳ ಮನೆಗೆ ಪ್ರವೇಶಿಸಿದನ್ನು ಅರಿತುಕೊಂಡ ಮನೆಯ ಸಿಬ್ಬಂದಿ ಎಚ್ಚರಗೊಂಡರು. ಮನೆಯಲ್ಲಿ ಗಲಾಟೆಯಿಂದ ನಿದ್ದೆಯಿಂದ ಎದ್ದ ಸೈಫ್ ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಇದೇ ವೇಳೆ ಕಳ್ಳ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ಘಟನೆ ಬಳಿಕ ಕಳ್ಳ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಶ್ರಮಿಸುತ್ತಿದ್ದಾರೆ. ಸೈಫ್ ಅಲಿ ಖಾನ್ (Saif Ali Khan) ಪತ್ನಿ, ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಶೀಘ್ರದಲ್ಲೇ ಪ್ರಕರಣದ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಮನೆಯ ಸುತ್ತ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಗಾಯಗೊಂಡ ಸೈಫ್ ಅವರನ್ನು ಚಿಕಿತ್ಸೆಗಾಗಿ ಸಮೀಪದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಮಾತನಾಡಿ, ಸೈಫ್‌ಗೆ ಆರು ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಆಳವಾದವುಗಳಾಗಿವೆ. ಗಾಯಗಳಲ್ಲಿ ಒಂದು ಅವರ ಬೆನ್ನುಮೂಳೆಯ ಹತ್ತಿರದಲ್ಲಿದೆ. ನಾವು ಅವರಿಗೆ ಆಪರೇಷನ್ ಮಾಡುತ್ತಿದ್ದೇವೆ. ನರಶಸ್ತ್ರಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ನಿಶಾ ಗಾಂಧಿ ಅವರಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.