ನಟ ದರ್ಶನ್‌ಗೆ ವಿಶೇಷ ಸತ್ಕಾರವಿಲ್ಲ

Darshan
Published on

ಬೆಂಗಳೂರು: ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಚರ್ಚೆಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ, ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದರು.
ಇನ್ನು ಹೊಸ ಅಪರಾಧ ಕಾನೂನಿನ ಬಗ್ಗೆ ಪ್ರತಿಕ್ರಿಯಿಸಿ, ಹೊಸ ಕಾನೂನುಗಳು ಒಂದು ರಾಜ್ಯಕ್ಕೆ ಮಾತ್ರ ಸಂಬಂಧಪಟ್ಟಿದ್ದರೆ ವಾಪಸ್ ಪಡೆಯುವಂತೆ ಹೇಳಬಹುದಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದು. ಹೊಸ ಕಾನೂನು ಅಡಿ ರಾಜ್ಯದಲ್ಲಿ 80 ಪ್ರಕರಣಗಳು, ಬೆಂಗಳೂರು ನಗರದಲ್ಲಿ 25ಕ್ಕು ಹೆಚ್ಚು ಪ್ರಕರಣಗಳು ಸೋಮವಾರ ದಾಖಲಾಗಿವೆ. ಮುಂದೆ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತವೆ. ಇದೆಲ್ಲವನ್ನು ಹೊಸ ಕಾನೂನಿನ ಅಡಿ ದಾಖಲಿಸಬೇಕು. ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಕಲಿತುಕೊಳ್ಳುತ್ತಾರೆ ಎಂದರು.
ಅನೇಕ ವಿಚಾರಗಳ ಕುರಿತು ಚರ್ಚೆಯಾಗಬೇಕಾಗುತ್ತದೆ. ಕೆಲವು ಉತ್ತಮವಾದ ಅಂಶಗಳು ಇವೆ. ಎಲ್ಲವನ್ನು ತೆಗೆದು ಹಾಕಲು ಆಗುವುದಿಲ್ಲ. ಬ್ರಿಟಿಷ್ ಕಾಲದಲ್ಲಿ ಇದ್ದ ಕಾನೂನುಗಳನ್ನು ಬದಲಾವಣೆ ಮಾಡಿ, ಆಧುನಿಕ ಜಗತ್ತಿಗೆ ಬೇಕಾದ ಕಾನೂನುಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೆಲವನ್ನು ನಾನು ಈಗಲೇ ಹೇಳುವುದಿಲ್ಲ. ಹೇಳಿದರೆ ಬೇರೆ ರೀತಿಯ ಅರ್ಥ ಬರುತ್ತದೆ. ಕೆಲವು ಕಾನೂನಿನ ಪ್ರಾವಿಷನ್ಸ್ ಸರಿಯಾಗಿ ಕಾಣಿಸುವುದಿಲ್ಲ. ಈ ಹಿಂದೆ ದಾಖಲಿಸುತ್ತಿದ್ದ ಪ್ರಕರಣಗಳು, ಈಗ ದಾಖಲಿಸಬೇಡಿ ಎಂಬರ್ಥದಲ್ಲಿವೆ. ಅವುಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.
ನಾವು ಕೆಲವು ವ್ಯಕ್ತಿಗಳನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಅಂತವುಗಳನ್ನು ಬಿಟ್ಟು ಬಿಡಬೇಕು ಎಂದು ಹೊಸ ಕಾನೂನಿನಲ್ಲಿ ಬಂದಿದೆ. ಮುಂದೆ ಅಂತಹ ಪ್ರಕರಣ ಬಂದಾಗ ದಾಖಲಿಸಬೇಡಿ ಎಂಬ ಲೆಕ್ಕದಲ್ಲಿವೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ಇದರಂತೆ ಸರಿಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net