ನಟ ದರ್ಶನ್ ಪ್ರಕರಣ; ಯಾವುದೇ ಮುಲಾಜಿಲ್ಲದೆ ಕ್ರಮ

Parameswar Crime11
Published on

ಬೆಂಗಳೂರು: ನಟ ದರ್ಶನ್ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟ ವ್ಯಕ್ತಿಗೆ ಕರೆಂಟ್ ಶಾಕ್ ನೀಡಲಾಗಿದೆ ಎಂಬುದು ಸೇರಿದಂತೆ ನಾನಾ ರೀತಿಯ ವದಂತಿಗಳಿವೆ. ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ವಿಚಾರಗಳು ಬಹಿರಂಗಗೊಳ್ಳುವುದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ವರದಿ ಬರುತ್ತದೆ. ನ್ಯಾಯಾಲಯ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಯಾರನ್ನೇ ರಕ್ಷಣೆ ಮಾಡುವುದಾಗಲಿ, ಯಾರ ಬಗ್ಗೆಯೂ ಮೃದು ಧೋರಣೆ ತೋರುವುದಾಗಲಿ ಇಲ್ಲ. ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮರು ನೇಮಕ ಸಮರ್ಥನೆ

ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ ಮರುನೇಮಕ ಕುರಿತ ಪ್ರಶ್ನೆಗೆ, ಆಡಳಿತಾತ್ಮಕವಾಗಿ ಏನು ಅಗತ್ಯ ಇದೆಯೋ ಅದನ್ನು ಮಾಡುತ್ತೇವೆ. ಕೆಲ ಸಂದರ್ಭಗಳಲ್ಲಿ ತನಿಖಾಧಿಕಾರಿಗಳನ್ನು ಬದಲಾಯಿಸಿದ್ದೇವೆ. ಸಮರ್ಥವಾದ ಅಧಿಕಾರಿ ಯಾರು ಇದ್ದಾರೆ ಎಂಬುದನ್ನು ಪರಿಗಣಿಸಿ, ಇಲಾಖೆಯ ಹಿರಿಯ ಅಧಿಕಾರಿಗಳೇ ಮರುನೇಮಕ ಮಾಡಿಕೊಳ್ಳುತ್ತಾರೆ. ನಾವ್ಯಾರು ಸೂಚನೆ ಕೊಡುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ

ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಮೀಸಲಾತಿ ಸಂಪೂರ್ಣ ಮಾಡಬೇಕು. ಮೀಸಲಾತಿ ಸರಿಯಿಲ್ಲ ಎಂದು ಯಾರಾದರು ಕೋರ್ಟ್‌ಗೆ ಹೋಗಬಹುದು. ಇದಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ನಿರ್ದಾಕ್ಷಿಣ್ಯ ಕ್ರಮ

ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವನೆ ಘಟನೆಯ ತಪ್ಪಿತಸ್ಥ ಅಧಿಕಾರಿಗಳ ವಜಾ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರು ಅದರಲ್ಲಿ ನೇರವಾಗಿ ಭಾಗಿಯಾಗಿರುತ್ತಾರೆ ಅವರನ್ನು ಅಮಾನತು ಮಾಡಬೇಕಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ, ವಾಟರ್‌ಮೆನ್‌ನನ್ನು ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಹಿರಿಯ ಅಧಿಕಾರಿಗಳ ಲೋಪ ಕಂಡು ಬಂದರೆ ಅವರನ್ನು ಅಮಾನತು ಮಾಡುತ್ತೇವೆ ಎಂದು ಡಾ.ಜಿ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net