ದಾಸನಿಗೆ ಮತ್ತೇ ಜೈಲು 'ದರ್ಶನ'! ಕೊಲೆ ಆರೋಪಿಯ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್ | Darshan Bail

Renukaswamy Death case
Published on

Darshan Bail: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನನ್ನು ಕಡೆಗೂ ಸುಪ್ರೀಂಕೋರ್ಟ್​ ರದ್ದುಗೊಳಿಸಿದೆ. ನ್ಯಾಯಧೀಶರಾದ ಜೆ.ಬಿ. ಪರ್ದಿವಾಲಾ, ಆರ್.ಮಹಾದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಈ ಮಹತ್ವದ ತೀರ್ಪನ್ನು ನೀಡಿದೆ.

ಆ.14ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಲಯ, ಕಡೆಗೂ ರಾಜ್ಯ ಸರ್ಕಾರ ಪರ ತೀರ್ಪು ನೀಡಿದೆ. ಎ2 ಆರೋಪಿ ದರ್ಶನ್​ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನನ್ನು ರದ್ದುಗೊಳಿಸುವಂತೆ ಸರ್ಕಾರ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಂಕೋರ್ಟ್​, ಕಡೆಗೂ 7 ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಈ ಮೂಲಕ ದರ್ಶನ್​ಗೆ ಜೈಲು ದರ್ಶನ ತೋರಿಸಿದೆ.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ!

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಎಷ್ಟೇ ದೊಡ್ಡವರಿದ್ದರೂ ಕಾನೂನಿನ ಮುಂದೆ ದೊಡ್ಡವರಲ್ಲ. ಆರೋಪಿ ಜೈಲಿನ ಲಾನ್​ನಲ್ಲಿ ಸಿಗರೇಟ್​ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್​ ಎಚ್ಚರಿಸಿದೆ.

ಹೈಕೋರ್ಟ್​ ಆದೇಶದಲ್ಲಿ ದೋಷವಿದೆ

ಆರೋಪಿಗಳಿಗೆ ಫೈವ್​ ಸ್ಟಾರ್​ ಟ್ರೀಟ್​ಮೆಂಟ್​ ನೀಡಲಾಗಿದೆ. ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದು ಲ್ಯಾಂಡ್​​ ಮಾರ್ಕ್​ ತೀರ್ಪು. ಇಲ್ಲಿ ಹೈಕೋರ್ಟ್​ ಆದೇಶದಲ್ಲಿ ದೋಷವಿದೆ ಎಂದು ಸುಪ್ರೀಂಕೋರ್ಟ್ ತನ್ನ​ ತೀರ್ಪಿನಲ್ಲಿ ತಿಳಿಸಿದೆ.

7 ತಿಂಗಳ ಬಳಿಕ ಮತ್ತೇ ಜೈಲಿಗೆ

2024ರ ಡಿಸೆಂಬರ್​ 13ರಂದು ದರ್ಶನ್​ ಮತ್ತು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದಾದ ಬಳಿಕ ಜೈಲಿನಿಂದ ಹೊರಬಂದಿದ್ದ ಆರೋಪಿಗಳು ವಿದೇಶ ಪ್ರಯಾಣ, ಸುತ್ತಾಟ, ಮೋಜು-ಮಸ್ತಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಕೋರ್ಟ್​, ಎಲ್ಲ 7 ಆರೋಪಿಗಳ ಜಾಮೀನು ರದ್ದುಗೊಳಿಸುವ ಮೂಲಕ ಮತ್ತೇ ಜೈಲುವಾಸ ಅನುಭವವನ್ನು ಮುಂದುವರಿಸುವಂತೆ ಸೂಚಿಸಿದೆ.

ಸುಪ್ರೀಂಕೋರ್ಟ್ ಉಲ್ಲೇಖಿಸಿದ ಪ್ರಮುಖ ವಿಚಾರಗಳಿವು

  • ದರ್ಶನ್​ ಶರಣಾಗುವುದು ಯಾವಾಗ ಎಂಬುದು ಇಂದು ಸಂಜೆಯೊಳಗೆ ನಿರ್ಧಾರ.
  • ಆರೋಪಿ ಜೈಲಿನ ಲಾನ್​ನಲ್ಲಿ ಸಿಗರೇಟ್​ ಸೇದುವಂತಿಲ್ಲ.
  • ಇನ್ಮುಂದೆ ಫೋಟೋ, ವಿಡಿಯೋ ಕಂಡುಬಂದರೆ ಜೈಲಧಿಕಾರಿಗಳ ವಿರುದ್ಧ ಕ್ರಮ.
  • ಹೈಕೋರ್ಟ್​ ಆದೇಶದಲ್ಲಿ ಲೋಪವಿದೆ.
  • ಇದು ಲ್ಯಾಂಡ್​​ ಮಾರ್ಕ್​ ತೀರ್ಪು

'ಸುಪ್ರೀಂ' ತೀರ್ಪಿಗೂ ಮುನ್ನ ಏನೆಲ್ಲ ಆಗಿತ್ತು?

ಸುಪ್ರೀಂಕೋರ್ಟ್​ ಹೇಳಿದ್ದೇನು?

ನಟ ದರ್ಶನ್​ ಹಾಗೂ ಪವಿತ್ರಾ ಗೌಡಗೆ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಟೀಕಿಸಿದ್ದರು. ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ತುಂಬಾ ವಿಷಾದವಿದೆ. ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಅದೇ ರೀತಿಯ ಆದೇಶವನ್ನು ನಿರ್ದೇಶಿಸುತ್ತದೆಯೇ? ಕೊಲೆ ಪ್ರಕರಣಕ್ಕೆ ಬಂಧನದ ಆಧಾರಗಳನ್ನು ಒದಗಿಸಲಾಗಿಲ್ಲ ಎಂದು ಹೈಕೋರ್ಟ್​ ಹೇಳಿರುವುದು ತೊಂದರೆದಾಯಕವಾಗಿದೆ. ಇದು ಪ್ರಾಥಮಿಕವಾಗಿ, ನ್ಯಾಯಾಂಗ ಅಧಿಕಾರದ ದುರ್ಬಳಕೆಯಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪನ್ನು ಮಾಡುವುದು ಸ್ವೀಕಾರಾರ್ಹ ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಈ ರೀತಿ ಮಾಡುವುದು ಸರಿಯೇ ಎಂದು ಅಸಮಾಧಾನ ಹೊರಹಾಕಿದರು. ಈ ತೀರ್ಪುನಲ್ಲಿ ಹೈಕೋರ್ಟ್​ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್​ ಒತ್ತಿ ಹೇಳಿತ್ತು.

ಅಂದಹಾಗೆ, ಜುಲೈ 24ರಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ಎರಡೂ ಕಡೆಯ ವಕೀಲರಿಗೆ ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್​ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ. 3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ. ಸರ್ಕಾರದ ಪರ ಸಿದ್ಧಾರ್ಥ್​ ಲೂತ್ರಾ ಹಾಗೂ ನಟ ದರ್ಶನ್​ ಪರ ಸಿದ್ಧಾರ್ಥ್​ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್​ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಪ್ರಕಟಿಸಿದೆ.

ಕೊಲೆ ಕೇಸ್​ನ ಆರೋಪಿಗಳಾದ ನಟ ದರ್ಶನ್​, ಪವಿತ್ರಗೌಡ, ಪ್ರದೂಶ್​, ಲಕ್ಷ್ಮಣ್​, ನಾಗರಾಜು ಹಾಗೂ ಅನುಕುಮಾರ್​ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್​ 13ರಂದು ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ನಗರ ಪೊಲೀಸರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು. 2024ರ ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್​ನಲ್ಲಿ ನಟ ದರ್ಶನ್​ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net