ಉತ್ತರ ಭಾರತದಲ್ಲಿ ಭಾರೀ ಮಳೆ! ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ; ದೆಹಲಿಗೆ ರೆಡ್ ಅಲರ್ಟ್​ | Heavy Rains

ವಿಜಯವಾಣಿ (89)
Published on

Heavy Rains: ಹವಾಮಾನ ವೈಪರೀತ್ಯದಿಂದ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಧಾರಕಾರ ಮಳೆಯಾಗುತ್ತಿದೆ. ದೆಹಲಿಯಿಂದ ಹಿಡಿದು, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ವಿಪರೀತ ಮಳೆ ಸುರಿಯುತ್ತಿದೆ.

ಇತ್ತೀಚೆಗಷ್ಟೇ ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಹಠಾತ್​ ಪ್ರವಾಹದಲ್ಲಿ ಹಲವರು ದುರ್ಮರಣ ಹೊಂದಿದರು. ಈ ದುರಂತದ ಬಳಿಕ ಹೆಚ್ಚಿದ ವರುಣಾರ್ಭಟಕ್ಕೆ ಜನರು ಸಂಪೂರ್ಣ ತತ್ತರಿಸಿದ್ದಾರೆ. ಇನ್ನು ಇಂದು ಮುಂಜಾನೆಯಿಂದಲೇ ದೆಹಲಿ-ಎನ್‌ಸಿಆರ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರತ ಹವಾಮಾನ ಇಲಾಖೆ (IMD) ಹಲವು ಜಿಲ್ಲೆಗಳಿಗೆ ಯೆಲ್ಲೋ ಮತ್ತು ರೆಡ್​ ಅಲರ್ಟ್​ ಘೋಷಿಸಿದೆ.

ಘಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ನೀರು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ನಗರದಲ್ಲಿ ಆಗಸ್ಟ್ 17 ರವರೆಗೆ ವರುಣಾರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದಲ್ಲಿಯೂ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್​ ನೀಡಲಾಗಿದೆ. ಬರೇಲಿ, ಲಖಿಂಪುರ, ಪಿಲಿಭಿತ್, ಶಹಜಹಾನ್‌ಪುರ, ಬಹ್ರೈಚ್, ಸೀತಾಪುರ, ಶ್ರಾವಸ್ತಿ, ಬಲರಾಂಪುರ, ಸಿದ್ಧಾರ್ಥನಗರ, ಗೊಂಡಾ ಮತ್ತು ಮಹಾರಾಜ್‌ಗಂಜ್‌ಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಲಭಿಸಿದೆ.

ಗುರುವಾರ ಪಶ್ಚಿಮ ಉತ್ತರ ಪ್ರದೇಶದ ಅಧಿಕ ಸ್ಥಳಗಳಲ್ಲಿ ಮತ್ತು ಪೂರ್ವ ಪ್ರದೇಶದ ಕೆಲವೆಡೆ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಆಗಸ್ಟ್ 15ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net