ನಟ ಚೇತನ್‌ಗೆ 5 ಸಾವಿರ ದಂಡ: ವಾರೆಂಟ್ ಹಿಂಪಡೆದ ಹೈಕೋರ್ಟ್

highcourt
Published on

ಬೆಂಗಳೂರು:  ಹಿಜಾಬ್ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ನಟ ಚೇತನ್ ಕುಮಾರ್ ಅಹಿಂಸಾ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್ ಅನ್ನು ಹೈಕೋರ್ಟ್ ಹಿಂಪಡೆದಿದೆ. ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ₹5,000 ದಂಡ ವಿಧಿಸಿದೆ.

ಬೆಂಗಳೂರಿನ ಚೇತನ್ ಕುಮಾರ್ ಅಹಿಂಸಾ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್ ಜಮಾತ್ ಅಧ್ಯಕ್ಷ ಆರ್ ರಹಮತುಲ್ಲಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್ ಭಾರದ್ವಾಜ್ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ವಿಭಾಗೀಯ ಪೀಠ ನಡೆಸಿತು.

ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ನಟ ಚೇತನ್ ಪರ ವಕೀಲ ಜೆ. ಡಿ ಕಾಶಿನಾಥ್ ಅವರು ಸೆ.14 ರಂದು ನ್ಯಾಯಾಲಯವು ಹೊರಡಿಸಿರುವ ಜಾಮೀನುರಹಿತ ವಾರೆಂಟ್ ಹಿಂಪಡೆಯುವಂತೆ ಮಾಡಿದ ಪುರಸ್ಕರಿಸಿತು. ಇದಕ್ಕಾಗಿ ಚೇತನ್‌ಗೆ ₹5,000 ರೂ. ದಂಡ ವಿಧಿಸಿದ್ದು, ಅದನ್ನು ಹೈಕೋರ್ಟ್ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯ ಘಟಕಕ್ಕೆ ಪಾವತಿಸಬೇಕು ಎಂದಿದೆ.

ಈ ಮಧ್ಯೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ವಿಳಂಬವಾಗಿರುವುದರಿಂದ ಅರ್ಜಿಯು ಅನೂರ್ಜಿತವಾಗಲಿದೆ ಎಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಒಂದನೇ ಆರೋಪಿ ಆರ್. ರಹಮತುಲ್ಲಾ ಪರ ವಕೀಲ ಎ .ವೇಲನ್ ಆಕ್ಷೇಪಿಸಿದರು.

ಇದಕ್ಕೆ ಪೀಠವು ಈ ಹಂತದಲ್ಲಿ ಅದನ್ನು ಪರಿಗಣಿಸಲಾಗದು ಎಂದಿತು. ಅಂತಿಮವಾಗಿ ಪೀಠವು ಆರೋಪ ನಿಗದಿಗೂ ಮುನ್ನ ಆರೋಪಿಗಳನ್ನು ಆಲಿಸಲು ವಿಚಾರಣೆಯನ್ನು .6ಕ್ಕೆ ನಿಗದಿಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net