

ಗಮನಿಸಬೇಕಾದ ಅಂಶ: 1
ಕಳೆದ ಒಂದೂವರೆ ವರ್ಷದ ಹಿಂದೆ ನಟಿ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಅಂದಿನ ಆ ಗಳಿಗೆಯಲ್ಲಿ ಶ್ರುತಿ ಪರವಾಗಿ ಬೆನ್ನಿಗೆ ನಿಂತಿದ್ದರು ನಟ ‘ಆ ದಿನಗಳು’ ಖ್ಯಾತಿಯ ಚೇತನ್ ಅಹಿಂಸಾ. ಶ್ರುತಿಗೆ ನ್ಯಾಯ ಕೊಡಿಸಲು ಸರ್ಜಾ ಕುಟುಂಬವನ್ನು ಎದುರು ಹಾಕಿಕೊಂಡಿದ್ದರು.
ಗಮನಿಸಬೇಕಾದ ಅಂಶ: 2
ಇತ್ತೀಚೆಗಷ್ಟೇ ಧ್ರುವ ಸರ್ಜಾ ನಾಯಕತ್ವದ ‘ಪೊಗರು’ ಚಿತ್ರದ ಖರಾಬು ಹಾಡು ಬಿಡುಗಡೆ ಆಗಿತ್ತು. ಈ ಹಾಡು ಹೆಚ್ಚು ಹಿಟ್ಸ್ ಪಡೆಯುವುದರ ಜತೆಗೆ, ಸಾಕಷ್ಟು ಟೀಕೆಗೂ ಒಳಗಾಗಿತ್ತು. ಪ್ರಮುಖವಾಗಿ ರಶ್ಮಿಕಾ ಅವರನ್ನು ಧ್ರುವ ಎಳೆದಾಡುವುದು, ಕಿಚಾಯಿಸುವುದರ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಆ ಹಾಡಿನ ಬಗ್ಗೆ ‘ಆ ದಿನಗಳು’ ಚೇತನ್ ತಮ್ಮ ಟ್ವೀಟ್ ಮೂಲಕ ಧ್ರುವಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.
ಈ ಮೇಲಿನ ಎರಡು ಅಂಶಗಳನ್ನು ನೋಡುತ್ತಿದ್ದರೆ, ಸರ್ಜಾ ಕುಟುಂಬಕ್ಕೂ ಚೇತನ್ಗೂ ಆಗಿಬರಲ್ಲ ಎಂಬುದು ಮೇಲ್ನೋಟಕ್ಕೆ ಅನಿಸದೆ ಇರದು. ಆದರೆ, ಅಸಲಿ ಸತ್ಯ ಬೇರೆಯೇ ಇದೆ. ಸಿನಿಮಾ ಸಂಬಂಧಿ ಮುನಿಸಿದ್ದರೂ, ಚಿರು ಮತ್ತು ಚೇತನ್ ಆಪ್ತರು. ಮೀಟೂ ವಿವಾದ, ಪೊಗರು ಹಾಡಿನ ವಿವಾದದ ಬಗ್ಗೆ ಚಿರು, ಚೇತನ್ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ. ಅಷ್ಟಕ್ಕೂ ಆ ಸಮಯದಲ್ಲಿ ಇಬ್ಬರೂ ‘ರಣಂ‘ ಸಿನಿಮಾದಲ್ಲಿ ಬಿಜಿಯಾಗಿದ್ದರು. ವೈಯಕ್ತಿಕ ವಿಚಾರ ಬದಿಗಿಟ್ಟು ಸ್ನೇಹಿತರಾಗಿದ್ದರು. ಇದೀಗ ಆ ನೆಚ್ಚಿನ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. ಚಿರು ಸಾವಿನ ಬಗ್ಗೆ ಮರುಕವ್ಯಕ್ತಪಡಿಸಿರುವ ‘ಆ ದಿನಗಳು’ ಚೇತನ್, ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ.
‘ಸ್ನೇಹಿತ ಹಾಗೂ ಸಹ ನಟ ಚಿರು ಸರ್ಜಾರವರ ಅಕಾಲಿಕ ಮರಣ ಅತೀವ ನೋವು ತಂದಿದೆ.. ಸಿನೆಮಾ ಕ್ಷೇತ್ರಕ್ಕೆ ಬರುವ ಮುಂಚಿನಿಂದಲೂ ನಾವು ಒಬ್ಬರಿಗೊಬ್ಬರು ಬಲ್ಲವರಾಗಿದ್ದೆವು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು ಮತ್ತು ಕಾಳಜಿ ವಹಿಸುತ್ತಿದ್ದರು. ನಾವು 'ರಣಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು, ಆ ಸಿನೆಮಾ ಬಿಡುಗಡೆ ಆಗಬೇಕಿದೆ. ತುಂಬಾ ಬೇಗ ನಮ್ಮನ್ನೆಲ್ಲ ಬಿಟ್ಟು ಹೊದಿರಿ ಸ್ನೇಹಿತ. ಮೇಘನಾ, ಧ್ರುವ, ಅರ್ಜುನ್ ಸರ್, ಹಾಗೂ ಸರ್ಜಾ ಕುಟುಂಬದವರಿಗೆ ನಾನು ಸಂತಾಪ ಸೂಚಿಸುತ್ತೇನೆ’ ಎಂದು ಅಗಲಿದ ಸ್ನೇಹಿತನಿಗೆ ಕಂಬನಿ ಮಿಡಿದಿದ್ದಾರೆ.