ಅಂದುಕೊಂಡಂತಿಲ್ಲ ಟರ್ಕಿ!: ಗಲಾಟಾ ಟವರ್ ಬಳಿ ಹಲ್ಲೆಗೊಳಗಾದ ನಟ ಅಶ್ವತ್ಥ್ ಭಟ್

aswath 2
Published on

ಶ್ರೀಮಂತ ಪರಂಪರೆಯ ಐತಿಹಾಸಿಕ ತಾಣಗಳು, ಕಡಲ ತೀರ ಹಾಗೂ ಆಕರ್ಷಕ ಸಾಂಸ್ಕೃತಿಕ ಹೆಜ್ಜೆ ಗುರುತು ಹೊಂದಿರುವ ದೇಶ ಟರ್ಕಿ. ಬಹುತೇಕರಿಗೆ ನೆಚ್ಚಿನ ಪ್ರವಾಸ ತಾಣವೂ ಹೌದು. ಹಾಗೆಯೇ ಸಿನಿಮಾ ಶೂಟಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಎಂದೇ ಹೇಳಲಾಗುತ್ತದೆ. ಇತ್ತೀಚೆಗೆ ಟರ್ಕಿಯ ಪ್ರವಾಸ ತಾಣಗಳಲ್ಲಿ ದರೋಡೆಕಾರರ ಹಾವಳಿ ಹೆಚ್ಚಾಗುತ್ತಿದೆಯೇ ಎನಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ, ‘ರಾಜಿ’ ಚಿತ್ರದಲ್ಲಿ ನಟಿಸಿದ್ದ ಅಶ್ವತ್ಥ್ ಭಟ್ ಪ್ರವಾಸಕ್ಕೆಂದು ಇಸ್ತಾನ್‌ಬುಲ್‌ಗೆ ತೆರಳಿದ್ದಾಗ, ಗಲಾಟಾ ಟವರ್ ಬಳಿ ದರೋಡೆಕೋರರಿಂದ ಹಲ್ಲೆಗೆ ಒಳಗಾಗಿದ್ದಾರೆ.

‘ಟವರ್ ಕಡೆಗೆ ಹೋಗುತ್ತಿದ್ದಾಗ, ಒಬ್ಬ ವ್ಯಕ್ತಿ ಬಂದ. ಆತ ಕೈಯಲ್ಲಿ ಚೈನ್ ಹಿಡಿದಿದ್ದ. ನೋಡನೋಡುತ್ತಿದಂತೆಯೇ ನನ್ನ ಮೇಲೆ ಹಲ್ಲೆಗೆ ಮುಂದಾದ. ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ, ನನಗಂತೂ ತುಂಬ ಭಯವಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಡ್ರೈವರ್‌ರೊಬ್ಬರು ಬಂದು ಕಳ್ಳನನ್ನು ಓಡಿಸಿದರು. ಇದೊಂದು ದುರುದೃಷ್ಟಕರ ಘಟನೆ. ಟರ್ಕಿಯನ್ನು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸ್ಥಳವೆಂಬಂತೆ ತೋರಿಸಲಾಗುತ್ತದೆ. ಆದರೆ, ಅಲ್ಲಿ ಕೂಡ ಅಪರಾಧಗಳಾಗುತ್ತವೆ’ ಎಂದಿದ್ದಾರೆ. ಅಶ್ವತ್ಥ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ‘ಮಿಷನ್ ಮಜ್ನು’ವಿನಲ್ಲಿ ಅಶ್ವತ್ಥ್ ಕಾಣಿಸಿಕೊಂಡಿದ್ದರು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net