

ಬಾಗಲಕೋಟೆ: ಚಾಲುಕ್ಯರ ಕಾಲ ರಾಜಧಾನಿಯಾಗಿದ್ದ ಐಹೊಳೆಯ ಪುರಾತನ ದೇವಾಲಯಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿದ್ದು, ಐತಿಹಾಸಿಕ ದೇವಾಲಯಗಳ ಸೂಕ್ತ ನಿರ್ವಹಣೆಗೆ ಆಗ್ರಹಿಸಿ ಸ್ಯಾಂಡಲ್ವುಡ್ನ ನಾಯಕ ನಟ ಅನಿರುದ್ಧ್ ವಿಷ್ಣುವರ್ಧನ್ ವಿಡಿಯೋ ಸಂದೇಶದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಐಹೊಳೆ ಶಿಲ್ಪಕಲೆಯ ತೊಟ್ಟಿಲು, ದೇವಸ್ಥಾನಗಳ ಬೀಡು. ಇಲ್ಲಿಗೆ ಜಿಲ್ಲೆ, ದೇಶ, ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಆದರೆ ಇಲ್ಲಿರುವ ದೇವಸ್ಥಾನಗಳ ಸಂಕೀರ್ಣದಲ್ಲಿ ಕೆಲವು ದೇವಸ್ಥಾನಗಳ ಶಿಲ್ಪ, ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬೇಸರ ವ್ಯಕ್ತಪಡಿಸಿರುವ ನಟ ಅನಿರುದ್ಧ್ ಐತಿಹಾಸಿಕ ದೇವಸ್ಥಾನಗಳ ಫೋಟೋಗಳನ್ನು ಹಂಚಿಕೊಂಡಿದ್ದು ನಿರ್ವಹಣೆಗೆ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಟ ಅನಿರುದ್ಧ್ ಐಹೊಳೆಗೆ ಭೇಟಿ ನೀಡಿದ್ದರು. ವೇಳೆ ಗೋಡೆಗಳು, ಶಿಲ್ಪಗಳ ಮೇಲೆ ಬಿರುಕು ಕಾಣಿಸಿದ್ದು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ದುರಸ್ತಿ ಮತ್ತು ಸೂಕ್ತ ನಿರ್ವಹಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಇತ್ತ ನಟ ಅನಿರುದ್ಧ್ ಮಾಡಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಮರಳುಗಲ್ಲಿನ ದೇವಸ್ಥಾನಗಳಲ್ಲಿ ಆಗಾಗ ಸಣ್ಣ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ಅಧ್ಯಯನ ನಡೆಸಿ ಕಾಮಗಾರಿ ಕೈಗೊಳ್ಳಲಾಗುವುದು. ಶಿಲ್ಪಗಳಲ್ಲಿ ಬಿರುಕು ಬಿಟ್ಟಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಮಗಾರಿ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.