ಗೌರವಧನ ಹೆಚ್ಚಳಕ್ಕೆ ಕಾರ್ಯಕರ್ತೆಯರ ಆಗ್ರಹ

anaganavadi
ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಸಿ.ವಿಶಾಲಾ, ಎಸ್.ಎನ್.ಗೀತಾ, ವೇದಾವತಿ, ಇಂದಿರಾ, ಲಕ್ಷ್ಮೀ ಮುಂತಾದವರಿದ್ದರು.
Published on

ಶಿವಮೊಗ್ಗ : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ಗೌರವಧನವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಖಾನಾಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದ್ದರು. ಇದನ್ನು ಆರನೇ ಗ್ಯಾರಂಟಿ ಎಂದೇ ಬಿಂಬಿಸಲಾಗಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಭರವಸೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಕನಿಷ್ಟ ವೇತನ ನಿಗದಿ ಮಾಡಬೇಕು. ನಿವೃತ್ತರಾದವರಿಗೆ ಗ್ಯಾಚ್ಯುಟಿ ಸೌಲಭ್ಯ ನೀಡಬೇಕು. ನಮ್ಮದು ನಾಗರಿಕ ಸೇವೆ ಎಂದು ಪರಿಗಣಿಸಿ ಡಿ ದರ್ಜೆ ನೀಡಿ ಕೆಲಸ ಕಾಯಂಗೊಳಿಸಬೇಕು. ಕನಿಷ್ಟ ಗೌರವಧನ ನೀಡುವ ಮೂಲಕ ಸರ್ಕಾರ ನಮ್ಮ ಕೆಲಸವನ್ನು ಕೇವಲವಾಗಿ ಕಾಣುತ್ತಿದೆ ಎಂದು ದೂರಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಕೆ.ಸಿ.ವಿಶಾಲಾ, ಪ್ರಧಾನ ಕಾರ್ಯದರ್ಶಿ ವೇದಾವತಿ, ಖಜಾಂಚಿ ಸತ್ಯನಾಗರತ್ನ, ಪ್ರಮುಖರಾದ ಇಂದಿರಾ, ಲಕ್ಷ್ಮೀ, ಲೀಲಾವತಿ, ಎಸ್.ಎನ್.ಗೀತಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net