5,000 ದಾಟಿದ ಸಕ್ರಿಯ ಕೋವಿಡ್ ಕೇಸ್

untitled-design-7-6843334838e7f
Published on

ನವದೆಹಲಿ: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 5,000 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕೇರಳದಲ್ಲಿ ಅತಿ ಹೆಚ್ಚು ವ್ಯಾಧಿ ಪೀಡಿತರಿದ್ದು ಗುಜರಾತ್, ಪಶ್ಚಿಮ ಬಂಗಾಳ ಮತ್ತು ದೆಹಲಿ ನಂತರದ ಸ್ಥಾನಗಳಲ್ಲಿವೆ. ದೇಶದಲ್ಲಿ 5,364 ಸಕ್ರಿಯ ಕೇಸ್​ಗಳಿದ್ದು ಶುಕ್ರವಾರ ಬೆಳಿಗ್ಗೆ ವರೆಗಿನ 24 ಗಂಟೆಗಳಲ್ಲಿ ನಾಲ್ಕು ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಬಹುತೇಕ ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿದ್ದು ಮನೆಗಳಲ್ಲೇ ಆರೈಕೆಯಿಂದ ನಿರ್ವಹಿಸಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನಡುವೆ, ಕರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕತೆಯನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಮಾಡಲಾಗುತ್ತಿರುವ ಸಿದ್ಧತೆಯ ಪರಿಶೀಲನೆಗೆ ಕೇಂದ್ರ ಸಕಾರ ಅಣಕು ಕವಾಯತು ನಡೆಸುತ್ತಿದೆ.

ರಾಜ್ಯಗಳಿಗೆ ಕೇಂದ್ರ ನಿರ್ದೇಶನ: ಆಮ್ಲಜನಕ, ಐಸೊಲೇಶನ್ ಬೆಡ್​ಗಳು, ವೆಂಟಿಲೇಟರ್​ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ನಿರ್ದೇಶನ ನೀಡಿದೆ. ಈ ವರ್ಷ ಜನವರಿಯಿಂದೀಚೆಗೆ ದೇಶದಲ್ಲಿ ಇದುವರೆಗೆ ಕೋವಿಡ್​ನಿಂದ 55 ಜನರು ಮೃತಪಟ್ಟಿದ್ದಾರೆ. ಮೇ 22ರಂದು 257 ಸಕ್ರಿಯ ಪ್ರಕರಣ ಇದೀಗ ಐದು ಸಾವಿರವನ್ನು ದಾಟಿದೆ.

ಸರಣಿ ಸಭೆಗಳು

ಆರೋಗ್ಯ ಸೇವೆಗಳ ಮಹಾ ನಿರ್ದೇಶಕಿ ಸುನಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಜೂನ್ 2 ಮತ್ತು 3ರಂದು ತಾಂತ್ರಿಕ ಪರಿಶೀಲನಾ ಸರಣಿ ಸಭೆಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net