ಕರೊನಾ ಸೋಂಕಿನ ಸಕ್ರಿಯ ಪ್ರಕರಣ ತೀವ್ರ ಇಳಿಕೆ

Corona virs
Published on

ನವದೆಹಲಿ: ಭಾರತದಲ್ಲಿ ಶುಕ್ರವಾರ 70,800ಕ್ಕೂ ಅಧಿಕ ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 65 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7.95 ಲಕ್ಷಕ್ಕೆ ಇಳಿದಿದೆ. ಸೆಪ್ಟೆಂಬರ್ ಆರಂಭದಿಂದ ಅತ್ಯಂತ ವೇಗವಾಗಿ ಹೆಚ್ಚಾಗಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ವಾರಗಳ ನಂತರ 8 ಲಕ್ಷಕ್ಕಿಂತ ಕಡಿಮೆಯಾಗಿದೆ.

ಒಂದೇ ದಿನ 837 ಜನರು ಮೃತರಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 1.13 ಲಕ್ಷದಷ್ಟಾಗಿದೆ. ದೇಶದಲ್ಲಿ ಕರೊನಾ ಚೇತರಿಕೆ ಪ್ರಮಾಣ ಶೇ. 87.8ಕ್ಕೆ ಏರಿಕೆಯಾಗಿದೆ. ಶೇ. 10.7 ಪ್ರಕರಣಗಳು ಬಾಕಿಯುಳಿದಿವೆ. ಶೇ. 1.5 ಸೋಂಕಿತರು ಮೃತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸತತ ಪ್ರಯತ್ನದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈಹಿಕ ಅಂತರ ಮರೆತ ಎಐಎಡಿಎಂಕೆ

ತಮಿಳುನಾಡಿನ ಆಡಳಿತ ಪಕ್ಷವಾದ ಎಐಎಡಿಎಂಕೆ ಶನಿವಾರ ತನ್ನ 49ನೇ ಸಂಸ್ಥಾಪನಾ ದಿನ ಆಚರಿಸಿಕೊಂಡಿದೆ. ಚೆನ್ನೈನ ಮುಖ್ಯ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಕರೊನಾ ನಿಯಂತ್ರಿಸುವ ಸಲುವಾಗಿ ಐದಕ್ಕೂ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಆದರೂ ಕಾರ್ಯಕ್ರಮದಲ್ಲಿ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಜನರು ದೈಹಿಕ ಅಂತರ ಕಾಯ್ದುಕೊಂಡಿರಲಿಲ್ಲ. ಕಾರ್ಯಕ್ರಮದಲ್ಲಿ ನೂಕು-ನುಗ್ಗಲೂ ಉಂಟಾಗಿತ್ತು.

ಸೋಂಕು ರೂಪಾಂತರವಿಲ್ಲ

ಕರೊನಾ ಭಾರತದಲ್ಲಿ ಇದುವರೆಗೆ ರೂಪಾಂತರಗಳಿಗೆ ಒಳಗಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಔಷಧ ಸಿದ್ಧಪಡಿಸುವುದಕ್ಕೆ ಕರೊನಾ ರೂಪಾಂತರ ಮಾಹಿತಿ ಅಗತ್ಯವಾಗುತ್ತದೆ. ದೇಶದಲ್ಲಿ ಉನ್ನತ ವೈದ್ಯಕೀಯ ತಂಡ ಮತ್ತು ಜೈವಿಕ ತಂತ್ರಜ್ಞಾನ ವಿಭಾಗವು ಈ ವಿಚಾರವಾಗಿ ಸಂಶೋಧನೆ ನಡೆಸಿದೆ.

ಡಿಸೆಂಬರ್​ಗೆ 30 ಕೋಟಿ ಡೋಸೇಜ್ ಲಭ್ಯ

2020ರ ಡಿಸೆಂಬರ್ ವೇಳೆಗೆ ದೇಶದಲ್ಲಿ 20-30 ಕೋಟಿ ಡೋಸೇಜ್ ಔಷಧ ಲಭ್ಯವಿರಲಿದೆ ಎಂದು ಸೆರಂ ಇನ್​ಸ್ಟಿಟ್ಯೂಟ್​ನ ಮಹಾನಿರ್ದೇಶಕ ಡಾ. ಸುರೇಶ್ ಜಾಧವ್ ಹೇಳಿದ್ದಾರೆ. ಡಿಸೆಂಬರ್ ನಂತರದಲ್ಲಿ ಸೆರಂ ಇನ್​ಸ್ಟಿಟ್ಯೂಟ್ ತಿಂಗಳಿಗೆ ಕನಿಷ್ಠ 6-7 ಕೋಟಿ ಡೋಸೆಜ್ ಔಷಧ ತಯಾರಿಸಲಿದೆ. 2021ರ ವೇಳೆಗೆ ಎಲ್ಲೆಡೆ ಔಷಧ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಮ್ಮಿದ ಜಿನ್​ಪಿಂಗ್!

ಚೀನಾದ ಅಧ್ಯಕ್ಷ ಷಿ ಜಿನ್​ಪಿಂಗ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಅತಿಯಾಗಿ ಕೆಮ್ಮಿದ್ದು, ಅವರ ಆರೋಗ್ಯದ ಬಗ್ಗೆ ದೇಶದಲ್ಲೆಡೆ ಊಹಾಪೋಹ ಎದ್ದಿದೆ. ಅವರಿಗೂ ಕರೊನಾ ಸೋಂಕು ತಗುಲಿರಬಹುದೇ ಎನ್ನುವ ಚರ್ಚೆಗಳು ನಡೆಯುತ್ತಿವೆ. ಬುಧವಾರ ಶೆನ್ಜನ್​ನಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಜಿನ್​ಪಿಂಗ್, ಸುಮಾರು 50 ನಿಮಿಷದ ಭಾಷಣ ಮಾಡಿದ್ದಾರೆ. ಆದರೆ ಭಾಷಣ ಮಧ್ಯೆ ಹತ್ತಾರು ಬಾರಿ ಮಾತು ನಿಲ್ಲಿಸಿದ್ದಾರೆ. ಈ ಸಮಯದಲ್ಲಿ ಕ್ಯಾಮೆರಾಗಳನ್ನು ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರತ್ತ ತಿರುಗಿಸಲಾಗುತ್ತಿತ್ತು. ಆದರೆ ಜಿನ್​ಪಿಂಗ್ ಕೆಮ್ಮುತ್ತಿದ್ದ ಆಡಿಯೋ ಕೇಳಿಸಿದೆ. ಹತ್ತಾರು ಬಾರಿ ಭಾಷಣ ನಿಲ್ಲಿಸಿ, ನೀರು ಕುಡಿದು ಸುಧಾರಿಸಿಕೊಂಡು, ಭಾಷಣ ಮುಗಿಸಿದ್ದಾರೆ. ಜಿನ್​ಪಿಂಗ್ ಕೆಮ್ಮುತ್ತಿದ್ದ ವಿಚಾರವನ್ನು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅವರ ಆರೋಗ್ಯದ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net