

ಬೆಂಗಳೂರು: ಡ್ರಗ್ ಪೆಡ್ಲರ್‌ಗಳ ವಿರುದ್ಧ ಇನ್ಮುಂದೆ ಪಿಐಟಿ-ಎನ್‌ಡಿಪಿಎಸ್(ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ಸೈಕೋಟ್ರಾಫಿಕ್ ವಸ್ತುಗಳ ನಿಗ್ರಹ ಕಾಯ್ದೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಕಲ್ಲಸಂದ್ರದ ಶಂಕರ್ ಫೌಂಡೇಷನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಮಂದಿ ಸಾರ್ವಜನಿಕರು ನಗರದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿ, ಅದರಿಂದ ವಿದ್ಯಾರ್ಥಿಗಳು ಮಾತ್ರವಲ್ಲ, ಪಾಲಕರು ಕೂಡ ಪರೋಕ್ಷವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಆಯುಕ್ತರು, ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ಇತ್ತೀಚಿನ ಯುವಪೀಳಿಗೆ ವೇಗವಾಗಿ ಮಾದಕ ವಸ್ತುಗಳಿಗೆ ಆಕರ್ಷಣೆಯಾಗುತ್ತಿದೆ. ವಿಪರ್ಯಾಸವೆಂದರೆ ಕೆಲ ದೇಶಗಳಲ್ಲಿ ಡ್ರಗ್ಸ್ ಸೇವನೆಗೆ ಅವಕಾಶ ನೀಡಲಾಗಿದೆ. ಅದರಿಂದ ಪ್ರಭಾವಿತರಾದ ಯುವಕರು ಫ್ಯಾಶನ್ ರೀತಿ ಅದನ್ನು ಬಳಸುತ್ತಿದ್ದಾರೆ. ಅದನ್ನು ತಡೆಯಲು ಗೂಂಡಾ ಕಾಯ್ದೆ ಮಾದರಿಯಲ್ಲೇ ಪೆಡ್ಲರ್‌ಗಳ ಮೇಲೆ ಪಿಟ್-ಎನ್‌ಡಿಪಿಎಸ್ ಕಾಯ್ದೆ ಹಾಕುವ ಅವಕಾಶ ಕಾನೂನಿನಲ್ಲಿದ್ದು, ಅದನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಪೊಲೀಸ್ ಇಲಾಖೆಯು ಮಾದಕ ವಸ್ತುಗಳ ಸೇವನೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದು, ಡ್ರಗ್ ಪೆಡ್ಲರ್‌ಗಳ ಮೇಲೆ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ. ಸಾಕಷ್ಟು ಸಂಖ್ಯೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕೇವಲ ಗಾಂಜಾ ಮಾತ್ರವಲ್ಲದೆ, ಸಿಂಥೆಟಿಕ್ ಡ್ರಗ್ಸ್‌ಗಳಾದ ಕೊಕೇನ್, ಹೆರಾಯಿನ್, ಎಂಡಿಎಂಎ ನಂತಹ ಅತ್ಯಾಧುನಿಕ ಡ್ರಗ್ಸ್‌ಗಳನ್ನು ಸಹ ಅಪಾರ ಪ್ರಮಾಣದಲ್ಲಿ ಜಪ್ತಿ ಮಾಡಲಾಗಿದೆ.ಡ್ರಗ್ಸ್ ತಡೆಗಟ್ಟಲು ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲ, ಸಾರ್ವಜನಿಕರು, ಪಾಲಕರು ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು.
ಇನ್ನು ನಗರದ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾಗಳ ಜತೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮತ್ತು ದಟ್ಟಣೆ ನಿರ್ವಹಣೆಗೆ ಠಾಣೆಯಿಂದಲೇ ಮಾತನಾಡುವ ಮೂಲಕ ತಕ್ಷಣ ಸಮಸ್ಯೆ ಬಗೆಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ಕುಮಾರ್ ಶಹಾಪುರವಾಡ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದ್ದರು.