ಆಸ್ಪತ್ರೆಗೆ ಎಲ್ಲ ಸೌಕರ್ಯ ಒದಗಿಸಲು ಕ್ರಮ

16sgr1
ಸಾಗರದ ತಾಯಿ-ಮಗು ಆಸ್ಪತ್ರೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಡಾ. ಕೆ.ಪರಪ್ಪ, ಡಾ. ಬಿ.ಜಿ.ಸಂಗಮ್, ಎಚ್.ಕೆ.ನಾಗಪ್ಪ, ಮದನ್ ಇತರರಿದ್ದರು.
Published on

ಸಾಗರ: ತಾಯಿ-ಮಗು ಆಸ್ಪತ್ರೆಗೆ ಅಗತ್ಯ ಅನುದಾನ ನೀಡಿ ಎಲ್ಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಯಿ-ಮಗು ಆಸ್ಪತ್ರೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಲೇಬರ್ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಮಕ್ಕಳ ಐಸಿಯು ಘಟಕ ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆ ಅಭಿವೃದ್ಧಿಗೆ 1.45 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆಸ್ಪತ್ರೆ ದುರಸ್ತಿ, ಶೌಚಗೃಹ, ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಉಪವಿಭಾಗೀಯ ಆಸ್ಪತ್ರೆ, ತಾಯಿ-ಮಗು ಆಸ್ಪತ್ರೆಯ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಎರಡು ತಾಲೂಕು, ಅಕ್ಕಪಕ್ಕದ ಜಿಲ್ಲೆ ಮತ್ತು ತಾಲೂಕಿನಿಂದ ಜನರು ಬರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಆರೋಗ್ಯ ಸೇವೆ ಲಭ್ಯವಿದೆ ಎಂದರು.

ರಿಪ್ಪನ್‌ಪೇಟೆಯಲ್ಲಿ ನರ್ಸ್‌ಗಳ ಕೊರತೆ ಇದೆ. ವೈಯಕ್ತಿಕವಾಗಿ ಓರ್ವ ನರ್ಸ್‌ಗೆ ಗೌರವಧನ ನೀಡಿ ನೇಮಕ ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಸಮಸ್ಯೆಗಳು ಇದ್ದಲ್ಲಿ ನನಗೆ ಅಥವಾ ಆರೋಗ್ಯರಕ್ಷಾ ಸಮಿತಿ ಗಮನಕ್ಕೆ ತರಬೇಕು. ವೈದ್ಯರು ತಪ್ಪು ಮಾಡಿದರೆ ಅಮಾನತು ಅಥವಾ ಬೇರೆ ಕಡೆ ವರ್ಗಾವಣೆ ಮಾಡಲು ಅವಕಾಶವಿದೆ ಎಂದು ಹೇಳಿದರು.

ಸಮಸ್ಯೆಯಾದಾಗ ಆಸ್ಪತ್ರೆ ಎದುರು ಜಾತಿ, ಧರ್ಮದ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ವೈದ್ಯರು ಬೇರೆ ಕಡೆ ಹೋದರೆ ಬೇರೆ ವೈದ್ಯರನ್ನು ಕರೆತರುವುದು ಕಷ್ಟವಾಗುತ್ತದೆ. ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಸೇವೆ ಪಡೆಯಬೇಕು ಎಂದು ತಿಳಿಸಿದರು.

ಹಂದಿಗೋಡು ಕಾಯಿಲೆ ಸಂತ್ರಸ್ತರ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ ವಿಶೇಷ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಸಹಕರಿಸುವಂತೆ ಕೋರಿದ್ದೇನೆ. ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತೇನೆ ಎಂದರು.

ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಡಾ. ಬಿ.ಜಿ.ಸಂಗಮ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಸರ ಅಭಿಯಂತರ ಮದನ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಲಲಿತಮ್ಮ, ಎಲ್.ಚಂದ್ರಪ್ಪ, ಸೈಯದ್ ಜಾಕೀರ್, ಪ್ರಮುಖರಾದ ಟಿ.ಪಿ.ರಮೇಶ್, ಅಶೋಕ ಬೇಳೂರು, ಸುರೇಶಬಾಬು, ಕೆ.ಸಿದ್ದಪ್ಪ, ಡಿ.ದಿನೇಶ್, ಈಳಿ ಶ್ರೀಧರ್, ಕಲಸೆ ಚಂದ್ರಪ್ಪ, ಮನೋಜ್ ಕುಗ್ವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net