

ಮೈಸೂರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ತತ್ತರಿಸಿರುವ ಜನರ ನೋವಿಗೆ ಸ್ಪಂದಿಸಲು ಹಾಗೂ ಸ್ಥಳದಲ್ಲಿ ಸಿಲುಕಿಕೊಂ ಡಿರುವ ಕನ್ನಡಿಗರನ್ನು ಕರೆ ತರಲು ಮೈಸೂರು ಜಿಲ್ಲಾಡಳಿತ ತಂಡ ರಚಿಸಿದೆ.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರಿಗಳ ಒಟ್ಟು 8 ತಂಡಗಳನ್ನು ರಚಿಸಿದ್ದಾರೆ. ಸಮನ್ವಯ ತಂಡ, ಮೈಸೂರಿಗರನ್ನು ಕರೆ ತರಲು ತಂಡ, ವೈದ್ಯಕೀಯ ನೆರವು ನೀಡುವ ತಂಡ, ಆಹಾರ ಸಾಮಗ್ರಿ, ವಾಹನ ವ್ಯವಸ್ಥೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಲು ತಂಡಗಳನ್ನು ರಚಿಸಲಾಗಿದೆ.
ವೈದ್ಯಕೀಯ ತಂಡ ಸಜ್ಜು:
ಎಚ್.ಡಿ. ಕೋಟೆ ಹಾಗೂ ಕೆ.ಆರ್. ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತರಲು ಸಾಕಷ್ಟು ಬಸ್ ಹಾಗೂ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಾರ್ಥಿವ ಶರೀರವನ್ನು ಸಂರಕ್ಷಣೆ ಮಾಡಲು ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರರನ್ನು ಗುರುತಿಸಲಾಗಿದೆ. ಮಾಹಿತಿಗೆ ಸಹಾಯವಾಣಿ 0821-24223800 ಸಂಪರ್ಕಿಸಬಹುದು.
ಮಾಹಿತಿ ನೀಡಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ನೂರಾರು ಮಂದಿ ಸಿಲುಕಿಕೊಂಡಿದ್ದು, ಭೂ ಕುಸಿತದಲ್ಲಿ ಜಿಲ್ಲೆಯ ಜನರು ಸಿಲುಕಿಕೊಂಡಿದ್ದರೆ ಜಿಲ್ಲೆಯ ವಿಪತ್ತು ನಿಯಂತ್ರಣ ಕೊಠಡಿ ದೂ:0821-2423800 ಅಥವಾ 1077ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.