ಹಾಸ್ಟೆಲ್‌ಗಳ ಸ್ಥಿತಿ ಸುಧಾರಣೆಗೆ ಕ್ರಮ

hostel
ಚಿಕ್ಕಮಗಳೂರು ನಗರ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ವಿದ್ಯಾರ್ಥಿ ನಿಲಯ.
Published on

ಚಿಕ್ಕಮಗಳೂರು: ಸರ್ಕಾರಿ ವಿದ್ಯಾರ್ಥಿ ನಿಲಯಗಳು ಎಂದರೇ ಮೂಗು ಮೂರಿಯುವವರೇ ಹೆಚ್ಚು. ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳಡಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಸರಿಯಾಗಿ ಸೌಲಭ್ಯ ದೊರೆಯುತ್ತಿಲ್ಲ.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸಬೇಕಾದ ಜವಾಬ್ದಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಸಮರ್ಪಕ ಕುಡಿಯುವ ನೀರು, ಊಟ, ತಿಂಡಿಯನ್ನು ಮೆನು ಪ್ರಕಾರ ನೀಡಲಾಗುತ್ತಿದೆಯೇ. ಆಟದ ಮೈದಾನ, ಗ್ರಂಥಾಲಯ, ಹೀಗೆ ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಬಗ್ಗೆ ವಿಚಾರಣೆಗೆ ಮುಂದಾಗಿರುವ ಸರ್ಕಾರ ಅಧಿಕಾರಿಗಳ ಕಡ್ಡಾಯವಾಗಿ 15 ದಿನಗಳಿಗೊಮ್ಮೆ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ವಿದ್ಯಾರ್ಥಿಗಳ ಸಮಸ್ಯೆ ಅಲಿಸಲು ಸೂಚಿಸುವ ಮೂಲಕ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಮುಂದಾಗಿದೆ.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಐಟಿಡಿಪಿ, ಅಲ್ಪಸಂಖ್ಯಾತರ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 224ವಿದ್ಯಾರ್ಥಿ ನಿಲಯಗಳಿವೆ. ಆ ಪೈಕಿ 103ಮೆಟ್ರಿಕ್ ಪೂರ್ವ, 69 ಮೆಟ್ರಿಕ್ ನಂತರ, 34 ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 15 ಆಶ್ರಯ ವಸತಿ ಶಾಲೆಗಳಿವೆ. 21,635 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
169 ಸ್ವಂತ ಕಟ್ಟಡ, 13 ಉಚಿತ ಕಟ್ಟಡ ಹಾಗೂ 42 ಬಾಡಿಗೆ ಕಟ್ಟಡಗಳಲ್ಲಿವೆ. ಬಾಡಿಗೆ ಕಟ್ಟದಲ್ಲಿ ಇರುವ ವಿದ್ಯಾರ್ಥಿ ನಿಲಯಗಳಿಗೆ ಈಗಾಗಲೇ 10 ನಿವೇಶನ ಗುರುತಿಸಲಾಗಿದ್ದು, 14 ಕಾಮಗಾರಿ ಪ್ರಗತಿಯಲ್ಲಿವೆ. 5 ಕಟ್ಟಡಗಳ ಕಾಮಗಾರಿ ಬಾಕಿ ಇವೆ.
ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಅಥವಾ ದೂರದ ಊರುಗಳಿಂದ ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಪ್ರಯಾಣ ಮಾಡಿ ವ್ಯಾಸಂಗ ಮಾಡಲು ಸಾಧ್ಯವಿಲ್ಲ. ಬಡ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಬೇಕು ಎಂಬ ಪರಿಕಲ್ಪನೆಯಿಂದ ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದೆ.
ಅಭಿವೃದ್ಧಿಗೆ ತಕ್ಕಂತೆ ಪ್ರತಿ ವರ್ಷ ಬಜೆಟ್‌ನಲ್ಲಿ ಇಲಾಖೆವಾರು ಅನುದಾನವನ್ನು ಸರ್ಕಾರ ಮೀಸಲಿರಿಸುತ್ತದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆಯೇ? ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಲು ಜಿಲ್ಲಾಡಳಿತ ವಿಶೇಷ ಗಮನ ಹರಿಸಿದ್ದು, ತಂಡಗಳನ್ನು ರಚನೆ ಮಾಡಿದೆ.
ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿದ್ಯಾರ್ಥಿಗಳನ್ನು ನಿಗದಿಪಡಿಸಿದ್ದು, ಪ್ರತಿ 15 ದಿನಕ್ಕೊಮ್ಮೆ ನಿಗದಿತ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಮಸ್ಯೆ ಆಲಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದಾರೆ, ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆಗಳಲ್ಲಿ ಯಾವ ರೀತಿ ಅಂಕಗಳಿಸುತ್ತಿದ್ದಾರೆ, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆಯೇ ಒಟ್ಟಾರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಗಮನ ಹರಿಸುತ್ತಾರೆ. ಕಲಿಕೆಯಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳುತ್ತಾರೆ. ಮಕ್ಕಳು ಹಲವು ಕನಸುಗಳನ್ನು ಕಂಡಿರುತ್ತಾರೆ. ಗುರಿ ಸಾಧನೆಗೆ ತಕ್ಕ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸ್ನಾನ ಮಾಡಲು ಬಿಸಿ ನೀರು, ಆಡುಗೆ ಕೋಣೆ, ಆಟದ ಮೈದಾನ, ಊಟ-ತಿಂಡಿಗೆ ಗುಣಮಟ್ಟದ ತರಕಾರಿ, ಆಹಾರ ಸಾಮಗ್ರಿ ಸರಬರಾಜು ಮಾಡುತ್ತಿರುವ ಬಗ್ಗೆ ಪರಿಶೀಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದಾಗ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ತಿಂಗಳಿಗೊಮ್ಮೆ ನಡೆಯುವ ಪರಿಶೀಲನಾ ಸಭೆಗೆ ಸಲ್ಲಿಸಬೇಕು. ಕೊರತೆಯಿರುವ ಸೌಲಭ್ಯಗಳನ್ನು ವಿದ್ಯಾರ್ಥಿನಿಲಯಕ್ಕೆ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಕ್ರಮ ಕೈಗೊಂಡಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನ ಹುಮ್ಮಸ್ಸು ಹೆಚ್ಚಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುತ್ತಿರುವುದರಿಂದ ಸಮರ್ಪಕವಾಗಿ ಬೇಕಾಗಿರುವ ಸೌಲಭ್ಯಗಳು ಸಕಾಲಕ್ಕೆ ಮಕ್ಕಳಿಗೆ ದೊರೆಯುತ್ತಿವೆ.
ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯದಲ್ಲಿ ಸೌಲಭ್ಯಗಳು ಸರಿಯಿಲ್ಲ. ಯಾರನ್ನೇ ಕೇಳಿದರೂ ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಏನು ಮಾಡಲು ಸಾಧ್ಯವಿಲ್ಲ. ಇದಕ್ಕೆ ವಿದ್ಯಾರ್ಥಿಗಳು ಹೊಂದಿಕೊಂಡು ಹೋಗಬೇಕು ಎಂದು ಹೇಳುತ್ತಾರೆ ಎಂದು ವಿದ್ಯಾರ್ಥಿಗಳ ದೂರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಅನೇಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಇಲ್ಲಿ ಕನಿಷ್ಠ ಸೌಲಭ್ಯಗಳೂ ಸಿಗುವುದಿಲ್ಲ. ಇದರ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಬೇಕಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಾಸ್ಟೆಲ್‌ನಲ್ಲಿರುವ ಮಕ್ಕಳು ಕಲಿಕೆಯ ಕಡೆ ಗಮನಹರಿಸುತ್ತಿದ್ದಾರೆ. ಸಮಸ್ಯೆಗಳ ಪಟ್ಟಿ ಮಾಡಿ ಸಕಾಲದಲ್ಲಿ ಕಲ್ಪಿಸಲಾಗುವುದು ಎಂದು ಜಿಪಂ ಸಿಇಒ ಡಾ.ಬಿ.ಗೋಪಾಲ್ ಕೃಷ್ಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net