

ಬೆಂಗಳೂರು : ಮೊದಲಿಗೆ ಕಬ್ಬಲಿಗ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ಬಳಿಕ ಪರಿವಾರ ನಾಯಕ ಜಾತಿ ಪ್ರಮಾಣ ಪಡೆದುಕೊಂಡ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ 30 ಮಂದಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡಗಳನ್ನು ಮಾತ್ರ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ, ಆದರೆ ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪಪಂಗಡದವರಿಗೂ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಯಾದಗಿರಿಯ ರಾಜ್ಯ ಎಸ್‌ಸಿ ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ವಿಶೇಷ ವಕೀಲ ಸಿ. ಜಗದೀಶ ವಾದ ಮಂಡಿಸಿ, ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿತ್ತು. ಅದರ ಅನುಸಾರ ಸಂಬಂಧಪಟ್ಟ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಆ ಪ್ರಕಾರ ಮೊದಲಿಗೆ ಕಬ್ಬಲಿಗ, ನಂತರ ಪರಿವಾರ ನಾಯಕ ಎಂದು ಪಡೆದುಕೊಂಡಿರುವ 30 ಮಂದಿಯ ಜಾತಿ ಪ್ರಮಾಣಪತ್ರ ರದ್ದುಪಡಿಸಲು ಕ್ರಮ ಮುಂದಾಗಿರುವುದಾಗಿ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಕರಣಗಳಷ್ಟೇ ಅಲ್ಲದೆ ಈ ರೀತಿ ನಕಲಿ ಜಾತಿ ಪ್ರಮಾಣಪತ್ರ ಪಡೆದಕೊಂಡಿರುವ ಇತರರ ವಿರುದ್ದವೂ ಕ್ರಮ ಜರಗಿಸಲು ಈ ಹಿಂದೆ ಆದೇಶಿಸಲಾಗಿತ್ತು. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಪ್ರಶ್ನಿಸಿತು. ಮೊದಲಿಗೆ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಕರಣಗಳಿಗೆ ನೋಟಿಸ್ ಕೊಡಲಾಗಿದೆ. ಉಳಿದವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು. ಸದ್ಯ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಹಾಗಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಮಧ್ಯೆ ಅರ್ಜಿದಾರರ ಪರ ವಕೀಲೆ ಓ. ಅಶ್ವಿನಿ ವಾದ ಮಂಡಿಸಿ, ಅರ್ಜಿಯಲ್ಲಿ ಉಲ್ಲೇಖಿಸಿದ್ದು ಕೇವಲ ಉದಾಹರಣೆಗಳಷ್ಟೇ, ಅಂತಹ ಸಾವಿರಾರು ಪ್ರಕರಣಗಳಿಗೆ. 6ರಿಂದ 7 ಸಾವಿರ ಮಂದಿ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಆ ಮಾಹಿತಿಯನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ಕಳಿಸಿಕೊಡಲಾಗಿದೆ ಎಂದುಹೇಳಿ, ಅದಕ್ಕೆ ಸಂಬಂಧಿಸಿದ ಮೆಮೋ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಆ ಮಾಹಿತಿಯನ್ನು ನಮಗೆ ಕೊಟ್ಟರೆ, ಅದರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಪರ ವಕೀಲರು ಭರವಸೆ ನೀಡಿದರು. ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡ ಎಲ್ಲರ ವಿರುದ್ಧ 3 ವಾರಗಳಲ್ಲಿ ಕ್ರಮಕೈಗೊಳ್ಳಲು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿತು.