ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಕ್ರಮ

janaspandana
ಆಯನೂರಿನಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿದರು. ರಾಜೀವ್, ಎನ್.ತಾರಾ, ಗಂಗಾನಾಯ್ಕ, ಸುಕನ್ಯಾ, ಸುಮಾ ಇದ್ದರು.
Published on

ಆಯನೂರು: ಆಯನೂರು ಸಮುದಾಯ ಆರೋಗ್ಯ ಕೇಂದ್ರವೂ ಸಮಸ್ಯೆಗಳ ಆಗರ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 72 ಗ್ರಾಮಗಳು ಬರುತ್ತವೆ, ಆದರೆ ವೈದ್ಯರ ಕೊರತೆ ಇದೆ. ಸಂಜೆ ನಂತರ ವೈದ್ಯರೇ ಇರುವುದಿಲ್ಲ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರ ಗಮನಕ್ಕೆ ತಂದರು.

ಆಯನೂರು, ಕುಂಸಿ ಹಾಗೂ ಹಾರನಹಳ್ಳಿ ಹೋಬಳಿಗಳ ಜನ ಸ್ಪಂದನ ಕಾರ್ಯಕ್ರಮವನ್ನು ಇಂದು ಆಯನೂರಿನಲ್ಲಿ ಸೋಮವಾರ ನಡೆದ ಆಯನೂರು, ಕುಂಸಿ ಹಾಗೂ ಹಾರನಹಳ್ಳಿ ಹೋಬಳಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ದೂರುಗಳ ಸುರುಮಳೆಗೈದರು.

ಸರಿಯಾಗಿ ಮಾತ್ರೆಗಳು ದೊರೆಯುತ್ತಿಲ್ಲ. ಈಗಿರುವ ವೈದ್ಯಾಧಿಕಾರಿ ಹಾಗೂ ನೌಕರ ಸೋಮಣ್ಣ ಅವರನ್ನು ವರ್ಗಾವಣೆ ಮಾಡಬೇಕು. ಅಲ್ಲದೆ, ಆಯನೂರು ಉರ್ದು ಶಾಲೆಗೆ ಸುಣ್ಣ-ಬಣ್ಣ ಆಗಬೇಕು. ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಪಂನಿಂದ ಎನ್‌ಒಸಿ ಸಮಸ್ಯೆ ಆಗುತ್ತಿದೆ ಎಂದು ಗಮನಕ್ಕೆ ತಂದರು.

ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ನಟರಾಜ್ ಅವರನ್ನು ಸ್ಥಳಕ್ಕೆ ಕರೆಯಿಸಿದ ಶಾಸಕಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಲವು ವರ್ಷಗಳಿಂದ ಸಮಸ್ಯೆ ಕೇಳುತ್ತಿದ್ದೇನೆ. ಹಲವು ಭಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಶೀಘ್ರವೇ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಆಯನೂರು ನಾಡಕಚೇರಿ ಆರಂಭವಾಗಿ ಹಲವು ವರ್ಷಗಳಾಗಿವೆ. ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಡಿ ಗ್ರೂಪ್ ನೌಕರರಿಗೆ ವೇತನ ಆಗುತ್ತಿಲ್ಲ. ಕಚೇರಿ ವೆಚ್ಚ, ಇನ್ನಿತರ ವೆಚ್ಚಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಈ ವಿಷಯವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಹೊಸೂರು ಗ್ರಾಮದ ಸ್ಮಶಾನಕ್ಕೆ 4 ಎಕರೆ ಜಾಗ ಮಂಜೂರಾಗಿದ್ದು ಆ ಜಾಗವನ್ನು ಒತ್ತುವರಿ ಮಾಡಲಾಗಿದೆ. ನಮಗೆ ಶವ ಹೂಳಲು ಜಾಗವಿಲ್ಲದಂತಾಗಿದೆ. ಜಾಗ ಒತ್ತುವರಿ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕಾರ್ಯಕ್ರಮ ಮುಗಿದ ಬಳಿಕ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದರು.

ಶಿವಮೊಗ್ಗ ತಾಲೂಕು ತಹಸೀಲ್ದಾರ್ ರಾಜೀವ್, ತಾಪಂ ಇಒ ಎನ್.ತಾರಾ, ಆಯನೂರು ಗ್ರಾಪಂ ಅಧ್ಯಕ್ಷ ಗಂಗಾನಾಯ್ಕ, ಉಪಾಧ್ಯಕ್ಷ ಸುಮಾ, ಕೋಹಳ್ಳಿ ಗ್ರಾಪಂ ಅಧ್ಯಕ್ಷೆ ಸುಕನ್ಯಾ, ಬಿಇಒ ರಮೇಶ್, ಎಇಇ ಹಾಲಾನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net