ಸಾಲಿಗ್ರಾಮ : ಇ-ಸ್ವತ್ತು ಮಾಡಿಸಲು ಲಂಚ ಪಡೆಯುತ್ತಿರುವ ಮಿರ್ಲೆ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ನೊಂದ ಫಲಾನುಭವಿಗಳು ಎಚ್ಚರಿಕೆ ನೀಡಿದರು.
ತಾಲೂಕಿನ ಮಿರ್ಲೆ ಗ್ರಾಮ ಪಂಚಾಯಿತಿ ಪಿಡಿಒ ಸಂದೀಪ್ ವಿರುದ್ಧ ಸಾರ್ವಜನಿಕರು ಕೆಂಡಮಂಡಲರಾಗಿದ್ದಾರೆ. ಪಿಡಿಒ ವಿರುದ್ಧ ಹೋರಾಟ ರೂಪಿಸಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ನಿರ್ಧಾರ ಮಾಡಲಾಯಿತು.
ಪಿಡಿಒ ಸಂದೀಪ್ ಇ-ಸ್ವತ್ತು ಮಾಡಿಕೊಡಲು 20 ಸಾವಿರ ರೂ. ಲಂಚ ಕೇಳುತ್ತಿದ್ದು, ಲಂಚ ಕೊಟ್ಟರೂ ಕೆಲಸ ಮಾಡಿ ಕೊಟ್ಟಿಲ್ಲ ಎಂದು ಗ್ರಾಮದ ಜಯಂತ್ ಬಹಿರಂಗವಾಗಿ ಆರೋಪಿಸಿದರು. ನಾನೊಬ್ಬ ಸಾಮಾನ್ಯ ರೈತನಾಗಿದ್ದು, ಕೇಳಲು ಹೋದರೆ ಕತ್ತು ಹಿಡಿದು ಹೊರಕ್ಕೆ ದಬ್ಬಿ ಎಂದು ಸಿಬ್ಬಂದಿಗೆ ಹೇಳುವ ಮೂಲಕ ನನಗೆ ಅವಮಾನ ಮಾಡಿದ್ದಾರೆ. ಇದು ಮನಸ್ಸಿಗೆ ತುಂಬ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿಡಿಒ ಸಾರ್ವಜನಿಕರ ಜತೆ ಅಗೌರವದಿಂದ ನಡೆದುಕೊಳ್ಳುವುದು, ಏಕವಚನದಲ್ಲಿ ನಿಂದಿಸುವುದು, ರೈತರನ್ನು ಕತ್ತು ಹಿಡಿದು ಹೊರಗೆ ತಳ್ಳಿ ಎಂದು ಗದರಿಸುವ ದುಂಡಾವರ್ತನೆ ಸಹಿಸಲು ಸಾಧ್ಯವಿಲ್ಲ. ಇ-ಸ್ವತ್ತು ಮಾಡಿಸಲು ಮಧ್ಯವರ್ತಿಗಳ ಮೂಲಕ ಲಂಚ ಕೇಳುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬಿಲ್ ತೆಗೆದುಕೊಂಡಿದ್ದಾರೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಲ್ಲದೆ, ಲೋಕಾಯುಕ್ತರಿಗೆ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹಲವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ತನಿಖೆ ಮಾಡಿ ನ್ಯಾಯ ಕೊಡಿಸಬೇಕು. ಇವರ ಅವಧಿಯಲ್ಲಿ ಆಗಿರುವ ಅವ್ಯವಹಾರ ತನಿಖೆ ಆಗಬೇಕು, ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಮತ್ತು ಪಿಡಿಒ ಸಂದೀಪ್ ಇವರಿಬ್ಬರ ಅವಧಿಯಲ್ಲಿ ಹೆಚ್ಚು ಹಗರಣ ಆಗಿದ್ದು ತನಿಖೆ ಆಗಬೇಕು. ಇದ್ದ ಟ್ಯಾಂಕ್ ಒಡೆದು ಕಬ್ಬಿಣ ಮಾರಿಕೊಂಡಿದ್ದಾರೆ. ಸಾರ್ವಜನಿಕರು ಗಲಾಟೆ ಮಾಡಿದ ಮೇಲೆ ಗುಜರಿಯಿಂದ ಮತ್ತೆ ಅರ್ಧ ಕಬ್ಬಿಣ ತರಿಸಿ ಹಾಕಿದ್ದಾರೆ. ಯಾವುದೇ ಹರಾಜು ಪ್ರಕ್ರಿಯೆ ಮತ್ತು ಗ್ರಾಮ ಸಭೆ ಹಾಗೂ ಇತರ ಸರ್ಕಾರಿ ಕಾರ್ಯಕ್ರಮಗಳನ್ನು ಜನ ಸೇರಿಸಿ ಬಹಿರಂಗ ಸಭೆ ಮಾಡುವುದಿಲ್ಲ. ಇವರಿಗಿಷ್ಟ ಬಂದವರನ್ನು ಕರೆದುಕೊಂಡು ಸಹಿ ಮಾಡಿಸಿಕೊಂಡು ಕಾರ್ಯಕ್ರಮದಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೀತಾರಾಮ್, ಜಿಲ್ಲಾ ಪತ್ರ ಬರಹಗಾರ ರಾಜೀವ್, ವಸಂತಕುಮಾರ್, ಗೋವಿಂದಶೆಟ್ಟಿ, ಸಂದೇಶ್, ರಾಜೇಶ್, ನಾಗರಾಜೇಗೌಡ, ಆರ್.ಶ್ರೀಧರ್, ಪ್ರವೀಣ್, ಬಾಬು, ಆನಂದ್, ಮಂಜುನಾಥ್, ಮಂಜು, ರಮೇಶ್, ಮುರುಳಿ, ಎಂ.ಎಸ್.ಮಂಜು, ಎಂ.ಡಿ. ಮಂಜುನಾಥ್ ಇತರರು ಪಾಲ್ಗೊಂಡಿದ್ದರು.
-------
ಚಿತ್ರ -
ಮಿರ್ಲೆ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರ ದುವರ್ತನೆ ಖಂಡಿಸಿ ನೊಂದ ಸಂತ್ರಸ್ತರು ಸಭೆ ನಡೆಸಿದರು.
------