ಶಾಂತಿ ಸ್ಥಾಪನೆಗೆ ಕ್ರಮ ಅಗತ್ಯ

ವಿಜಯವಾಣಿ-2-1
Published on

ಜಗತ್ತಿನ ಬಹುತೇಕ ಕಡೆ ಹಿಂಸೆ, ಅಶಾಂತಿಯ ಕರಾಳ ಛಾಯೆ ಆವರಿಸಿಕೊಂಡಿದ್ದು, ಅಮಾಯಕರ ಜೀವಬಲಿ ಮುಂದುವರಿದಿದೆ. ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿಯನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಚಳವಳಿ, ದಂಗೆಯಾಗಿ ಬದಲಾಗಿದೆ. 350ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶೇಖ್ ಹಸೀನಾ ಜೀವಭಯದಿಂದ ದೇಶವನ್ನು ತೊರೆದಿದ್ದಾರೆ. ಪ್ರಧಾನಿ ನಿವಾಸಕ್ಕೂ ಪ್ರತಿಭಟನಾಕಾರರು ನುಗ್ಗಿ, ದಾಂಧಲೆ ನಡೆಸಿದ್ದಾರೆ. ಬಾಂಗ್ಲಾದೇಶದಲ್ಲಿನ ಕ್ಷಿಪ್ರ ದಂಗೆ ಹಿನ್ನೆಲೆಯಲ್ಲಿ 4,096 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆಯು (ಬಿಎಸ್​ಎಫ್) ಹೈಅಲರ್ಟ್ ಘೋಷಿಸಿದೆ. ಈಶಾನ್ಯ ಭಾರತದ ಐದು ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ. ಬಾಂಗ್ಲಾದೇಶದಲ್ಲಿ ತಲೆದೋರಿರುವ ಸಾಮಾಜಿಕ ಪ್ರಕ್ಷುಬ್ಧತೆ ಮತ್ತು ಅದರಿಂದ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯು ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಒಂದು ಪಾಠವಾಗಿದೆ. ಎಷ್ಟೇ ಜನಪರ ಎನ್ನಿಸಿಕೊಳ್ಳುವಂತಹ ನೀತಿನಿರ್ಧಾರಗಳನ್ನು ಸರ್ಕಾರ ಕೈಗೊಂಡರೂ, ಅನುಷ್ಠಾನಗೊಳಿಸುವಲ್ಲಿ ತೋರಬೇಕಾದ ಸಂಯಮ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

ಆಡಳಿತ ನಡೆಸುವವರು ಪರ-ವಿರೋಧ ಅಭಿಪ್ರಾಯಗಳೆರಡನ್ನೂ ಗಣನೆಗೆ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾದೇಶದ ಈಗಿನ ಬೆಳವಣಿಗೆಯೇ ಸಾಕ್ಷಿಯಾಗಿದೆ. ನಾಗರಿಕ ಸೇವೆಗಳಲ್ಲಿ ಸದ್ಯ ಇರುವ ಮೀಸಲಾತಿಯನ್ನು ಪರಿಷ್ಕರಿಸುವಂತೆ, ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಒಳಗೊಂಡು, ಎಲ್ಲ ರೀತಿಯ ಕೋಟಾಗಳನ್ನು ರದ್ದುಪಡಿಸುವಂತೆ ಚಳವಳಿಕಾರರು ಆಗ್ರಹಿಸುತ್ತಿದ್ದಾರೆ. ಶೇಖ್ ಹಸೀನಾ ಜನರ ದನಿಯನ್ನು ನಿರ್ಲಕ್ಷಿಸಿದರೆ ಅಥವಾ ಯುವಕರ ನೋವುಗಳಿಗೆ ಸ್ಪಂದಿಸಲಿಲ್ಲವೆ ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆಯಾದರೂ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸ್ಥಿರತೆ, ಒಂದಷ್ಟು ಅಭಿವೃದ್ಧಿಗೆ ತೆರೆದುಕೊಂಡಿದ್ದ ಬಾಂಗ್ಲಾದೇಶ ಮತ್ತೆ ಹಿಂಸೆಯ ಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಅದೇನಿದ್ದರೂ, ಆದಷ್ಟು ಶೀಘ್ರ ಅಲ್ಲಿನ ಪ್ರಕ್ಷುಬ್ಧತೆ ಕೊನೆಗೊಂಡು ಚುನಾಯಿತ ಸರ್ಕಾರ ಸ್ಥಾಪನೆಗೊಳ್ಳುವಂತಾಗಲಿ.

ಮಧ್ಯಪ್ರಾಚ್ಯದಲ್ಲೂ ಉದ್ವಿಗ್ನತೆ ನೆಲೆಸಿದೆ. ಪ್ಯಾಲೆಸ್ತೀನ್​ನ ಹಮಾಸ್ ಸಂಘಟನೆಯ ಮುಂಚೂಣಿ ನಾಯಕ ಇಸ್ಮಾಯಿಲ್ ಹನಿಯೆನನ್ನು ಇರಾನ್ ರಾಜಧಾನಿ ಟೆಹ್ರಾನಿನಲ್ಲಿ ಜುಲೈ 31ರಂದು ಹತ್ಯೆಗೈಯ್ಯಲಾಗಿದೆ. ಹಮಾಸ್ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಲು ಇರಾನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂದಿನ 24 ಅಥವಾ 48 ಗಂಟೆಗಳಲ್ಲಿ ದಾಳಿಗಳನ್ನು ಆರಂಭಿಸಬಹುದು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ದಾಳಿಯನ್ನು ಎದುರಿಸಲು ಇಸ್ರೇಲ್​ಗೆ ಸಹಾಯಹಸ್ತ ಚಾಚಲು ಅಮೆರಿಕ ಮುಂದಾಗಿದೆ. ಮಧ್ಯಪ್ರಾಚ್ಯದ ಉದ್ವಿಗ್ನ ಸ್ಥಿತಿ ಕುರಿತಂತೆ ಅಮೆರಿಕದ ವಿದೇಶಾಂಗ ಸಚಿವ ಭಾನುವಾರ ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇಸ್ರೇಲ್ ಮೇಲೆ ಇರಾನ್ ದಾಳಿ ಆರಂಭವಾದರೆ ಮತ್ತೊಂದು ಯುದ್ಧ ನಿಶ್ಚಿತ. ರಷ್ಯಾ ಮತ್ತು ಯೂಕ್ರೇನ್ ನಡುವಣ ಸಮರ ಎರಡೂವರೆ ವರ್ಷದಿಂದ ಯಾವ ರ್ತಾಕ ಅಂತ್ಯವನ್ನೂ ಕಾಣದೆ ಸಾಗುತ್ತಲೇ ಇರುವ ನಡುವೆಯೇ ಜಗತ್ತು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆಯೇ? ಇಂಥ ಹೊತ್ತಲ್ಲಿ ಯುದ್ಧವಿರಾಮದ ಪ್ರಯತ್ನಗಳು ಹೆಚ್ಚಿ, ಜಾಗತಿಕ ನಾಯಕರು ಶಾಂತಿಸ್ಥಾಪನೆಯ ಮಾರ್ಗಗಳನ್ನು ಪ್ರಶಸ್ತಗೊಳಿಸುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net