

ಶಿವಮೊಗ್ಗ: ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ, ವಾಣಿಜ್ಯ ಉದ್ದೇಶಕ್ಕೆ ದುರ್ಬಳಕೆ ಹಾಗೂ ಪರಭಾರೆ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಜಿಲ್ಲಾ ಮಟ್ಟದ ಕೈಗಾರಿಕಾ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕಾಯ್ದಿರಿಸಿದ ಜಮೀನುಗಳನ್ನು ಖರೀದಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು.
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಆಟೋ ಕಾಂಪ್ಲೆಕ್ಸ್‌ಗೆ ನಗರಪಾಲಿಕೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಗತ್ಯವಿದ್ದರೆ ಒಂದೆರಡು ನಲ್ಲಿಗಳನ್ನು ಒದಗಿಸಲಾಗುವುದು. ನಿರ್ವಹಣೆ ದೃಷ್ಟಿಯಿಂದ ಪಾಲಿಕೆಗೆ ಸ್ವಲ್ಪ ಮಟ್ಟಿನ ಹಣ ಪಾವತಿಸಿ ಇದನ್ನು ಬಳಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಿರ್ಮಿಸುತ್ತಿರುವ ಹಾಗೂ ನಿರ್ಮಾಣವಾಗಿರುವ ಕಟ್ಟಡಗಳಲ್ಲಿ ಸಹಜವಾಗಿ ಮಳೆ ನೀರು ಸಂಗ್ರಹಿಸಲು ಗಮನಹರಿಸುವಂತೆ ಸೂಚಿಸಿದರು. ಅಗತ್ಯವಿದ್ದರೆ ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಒದಗಿಸಲಾಗುವುದು ಎಂದರು.
ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 110 ಕೆ.ವಿ.ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಭದ್ರಾವತಿ ನಗರಸಭೆ ವ್ಯಾಪ್ತಿಯ ಜೇಡಿಕಟ್ಟೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಿರಾಸ್ತಿಗಳ ಮೌಲ್ಯ ನಿಗದಿಪಡಿಸುವಲ್ಲಿ ನ್ಯೂನ್ಯತೆಗಳಿವೆ. ಅದನ್ನು ಸರಿಪಡಿಸಿ, ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಜಿಲ್ಲಾ ನೋಂದಣಾಧಿಕಾರಿ ಗಿರೀಶ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಕೈಗಾರಿಕಾಭಿವೃದ್ಧಿ ಪ್ರದೇಶದ ಉದ್ಯಮಿಗಳು ಸಕಾಲದಲ್ಲಿ ತೆರಿಗೆ ಪಾವತಿಸಿ, ಆಡಳಿತ ವ್ಯವಸ್ಥೆ ಸುಗಮವಾಗಲು ಸಹಕರಿಸಬೇಕು ಎಂದರು.
ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಇತರರಿದ್ದರು.