

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಖಾಲಿ ಇರುವ ಲೈನ್‌ಮನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು, ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಬೇಕು, ವಿದ್ಯುತ್ ತಂತಿ ಮೇಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು, ಮೆಸ್ಕಾಂ ದೂರವಾಣಿಯನ್ನು ವ್ಯವಸ್ಥಿತವಾಗಿಟ್ಟು ಸಾರ್ವಜನಿಕರ ತುರ್ತು ಕರೆಗಳಿಗೆ ಸ್ಪಂದಿಸಬೇಕು, ಜನಸಾಮಾನ್ಯರ ಸಮಸ್ಯೆ ಆಲಿಸಬೇಕು, ವಿದ್ಯುತ್ ಪೂರೈಕೆಯಲ್ಲಿ ಮತ್ತಷ್ಟು ಸುಧಾರಣೆ ತರಬೇಕು…ಎಂಬಿತ್ಯಾದಿ ಬೇಡಿಕೆಗಳು ಶುಕ್ರವಾರ ತಲ್ಲೂರಿನಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಕೇಳಿ ಬಂತು.
ತಲ್ಲೂರಿನ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದ ಮೆಸ್ಕಾಂ ತಲ್ಲೂರು ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಸಮಸ್ಯೆ, ಅಹವಾಲುಗಳನ್ನು ತೆರೆದಿಟ್ಟರು. ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ವಿದ್ಯುತ್ ತಂತಿ ಮೇಲಿರುವ ಅಪಾಯಕಾರಿ ಮರಗಳನ್ನು ಹಾಗೂ ರಸ್ತೆಯಲ್ಲಿ ಹಲವೆಡೆ ಕಡಿದು ಹಾಕಿದ ಮರದ ಗೆಲ್ಲುಗಳನ್ನು ತೆರವುಗೊಳಿಸಲು ಮನವಿ ಮಾಡಿದರು. ಅಶೋಕ ಬಗ್ವಾಡಿ ಮತ್ತು ಕೈಗಾರಿಕೋದ್ಯಮಿ ಜಯಕರ ಶೆಟ್ಟಿ ಅವರು ನಿರಂತರ ವಿದ್ಯುತ್ ಕಡಿತದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಗಂಗೊಳ್ಳಿ ಛಾಯಾಗ್ರಾಹಕ ಗಣೇಶ ಪಿ.ವೆಲ್‌ಕಂ, ತಮ್ಮ ಅಂಗಡಿಯ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತದಿಂದ ಸಮಸ್ಯೆಯಾಗುತ್ತಿದ್ದು, ಅದನ್ನು ಸ್ಥಳಾಂತರಗೊಳಿಸುವಂತೆ ಆಗ್ರಹಿಸಿದರು.
ಮೆಸ್ಕಾಂ ಉಡುಪಿ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ ಉಪಾಧ್ಯಾ ಪಿ. ಅಧ್ಯಕ್ಷತೆ ವಹಿಸಿದ್ದರು. ಕಟ್‌ಬೇಲ್ತೂರು ಗ್ರಾಪಂ ಅಧ್ಯಕ್ಷೆ ವೈಶಾಲಿ, ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯ ಬಿ.ಗಣೇಶ ಶೆಣೈ, ಕೃಷ್ಣ ಪೂಜಾರಿ ತಲ್ಲೂರು, ಬಿ.ಪ್ರಕಾಶ ಶೆಣೈ ಗಂಗೊಳ್ಳಿ, ಮೆಸ್ಕಾಂ ತಲ್ಲೂರು ಉಪವಿಭಾಗದ ಗ್ರಾಮಗಳ ಗ್ರಾಹಕರು ಪಾಲ್ಗೊಂಡಿದ್ದರು. ಮೆಸ್ಕಾಂ ಇಂಜಿನಿಯರ್‌ಗಳಾದ ಗುರುಪ್ರಸಾದ್ ಭಟ್, ಹರೀಶ ಕುಮಾರ್, ಶೋಭಾ ಜಿ.ಆರ್., ರಾಜೇಶ, ದಿನೇಶ ಶೆಟ್ಟಿ, ವಾಸು ಮರಾಠಿ ಉಪಸ್ಥಿತರಿದ್ದರು.
ತಲ್ಲೂರಿನಲ್ಲಿ ಗುಡಿ ಕೈಗಾರಿಕೆಗಾಗಿ ಮಂಜೂರಾದ ವಿದ್ಯುತ್ ಸಂಪರ್ಕವನ್ನು ಅನ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಈವರೆಗೆ ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಲ್ಲೂರು ಗ್ರಾಪಂ ಸದಸ್ಯ ಉದಯಕುಮಾರ್ ತಲ್ಲೂರು ಪ್ರಶ್ನಿಸಿದರು. ಬಡವರಿಗೊಂಡು ನ್ಯಾಯ, ಉಳ್ಳವರಿಗೊಂದು ನ್ಯಾಯ ಎಂಬ ಧೋರಣೆಯನ್ನು ಮೆಸ್ಕಾಂ ಅಧಿಕಾರಿಗಳು ಬಿಡಬೇಕು. ಗ್ರಾಪಂನಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಿ ಜನಸಾಮಾನ್ಯರಿಗೆ ಸಹಕರಿಸಬೇಕು. ತಲ್ಲೂರು ಪೇಟೆ ವ್ಯಾಪ್ತಿಗೆ ಹೊಸ ಫೀಡರ್ ಅಳವಡಿಸಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಂಗೊಳ್ಳಿ ವಿದ್ಯುತ್ ಕಡಿತದ ಬಗ್ಗೆ ಪ್ರಸ್ತಾಪಿಸಿದ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ರಾಘವೇಂದ್ರ ಪೈ, ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡುವುದರಿಂದ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಲೈನ್‌ಮನ್ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಗಂಗೊಳ್ಳಿ ಜೂನಿಯರ್ ಕಾಲೇಜು ರಸ್ತೆಯಲ್ಲಿ ಎಚ್‌ಟಿ ವಿದ್ಯುತ್ ತಂತಿ ತುಂಬಾ ಕೆಳಗಡೆ ಇದೆ. ಅಲ್ಲದೆ ಮ್ಯಾಂಗನೀಸ್ ರಸ್ತೆಯಲ್ಲಿ ವಿದ್ಯುತ್ ಪರಿವರ್ತಕ ಕೈಗೆಟಕುವ ಎತ್ತರದಲ್ಲಿದ್ದು ಅನಾಹುತ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.