ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

Died
Published on

ಪಡುಬಿದ್ರಿ: ತಂದೆಯ ಸಾವಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಮೋಸಿನಾ(34) ಎಂಬುವರು ಮಲ್ಲಾರು ಗ್ರಾಮದ ಚಿಕ್ಕುತೋಟದಲ್ಲಿರುವ ಪತಿ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೋಸಿನಾ ಚಿಕ್ಕುತೋಟದ ಹಫೀಜ್ ಅಹಮ್ಮದ್ ಅವರೊಂದಿಗೆ ಮದುವೆಯಾಗಿ 9 ವರ್ಷ ಕಳೆದಿದ್ದು, ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇಬ್ಬರು ಹೆಣ್ಣುಮಕ್ಕಳು, ಅತ್ತೆ ಹಾಗೂ ನಾದಿನಿಯೊಂದಿಗೆ ಪತಿ ಮನೆಯಲ್ಲಿ ವಾಸವಾಗಿದ್ದರು. 12 ದಿನಗಳ ಹಿಂದೆ ಮೋಸಿನಾ ತಾಯಿ ಹಾಗೂ ಸಹೋದರಿ ಚಿಕ್ಕುತೋಟದ ಮನಗೆ ಬಂದಿದ್ದರು. ಗುರುವಾರ ರಾತ್ರಿ ಊಟ ಮಾಡಿ ತಾಯಿಯೊಂದಿಗೆ ಇಬ್ಬರು ಸಹೋದರಿಯರು ಹಾಗೂ ಅವರ ಮಕ್ಕಳು ಒಂದೇ ಕೋಣೆಯಲ್ಲಿ ಮಲಗಿದ್ದರು. ರಾತ್ರಿ 2.30ರ ವೇಳೆಗೆ ಮೋಸಿನಾಳ ಚಿಕ್ಕ ಮಗು ಅಳುತ್ತಿದ್ದ ಶಬ್ದ ಕೇಳಿ ಅವರ ತಾಯಿ ಎದ್ದು ನೋಡಿದಾಗ ಮೋಸಿನಾ ರೂಮಿನಲ್ಲಿ ಕಾಣಿಸಿರಲಿಲ್ಲ. ಹುಡುಕಾಡಿದಾಗ ಬಾವಿಯಲ್ಲಿ ಮೋಸಿನಾಳ ಮೃತದೇಹ ತೇಲಾಡುತ್ತಿರುವುದು ಕಂಡು ಬಂದಿತ್ತು.

9 ತಿಂಗಳ ಹಿಂದೆ ಮೋಸಿನಾ ತಂದೆ ತೀರಿಕೊಂಡಿದ್ದು, ಬಳಿಕ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದಕ್ಕಾಗಿ ಔಷಧವನ್ನು ಸೇವಿಸುತ್ತಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net