ಮೇಲ್ಭಾಗದಲ್ಲಿ ಟಾರ್ಪಲ್ ಬಳಸದ ವಾಹನಗಳ ವಿರುದ್ಧ ಕ್ರಮ

lorry
Published on

ಬೆಂಗಳೂರು: ನಿರ್ಮಾಣ ಸಾಮಾಗ್ರಿಗಳು ಸಾಗಿಸುವ ವೇಳೆ ಲಾರಿಗಳ ಮೇಲ್ಭಾಗದಲ್ಲಿ ಟಾರ್ಪಲ್ ಹಾಕಿಕೊಂಡು ಹೋಗದ ವಾಹನಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಸಂಚಾರ ಸಂಪರ್ಕ ದಿವಸ ಅಂಗವಾಗಿ ಕೊಟ್ಟಿಗೆಪಾಳ್ಯದಲ್ಲಿರುವ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ನಗರಾದ್ಯಂತ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಅವುಗಳಿಗೆ ಬೇಕಾದ ಕಲ್ಲು, ಜೆಲ್ಲಿ, ಸಿಮೆಂಟ್, ಮರಳುಗಳನ್ನು ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಆದರೆ, ಲಾರಿ ಚಾಲಕರು, ಅವುಗಳ ಮೇಲ್ಭಾಗವನ್ನು ಮುಚ್ಚದೆ ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಅವುಗಳ ಸಾಗಿಸುವ ವೇಳೆ ಧೂಳಿನ ಕಣಗಳು ಹೆಚ್ಚಾಗುತ್ತವೆ. ಜತೆಗೆ ಕೆಲವೊಮ್ಮೆ ಜೆಲ್ಲಿ ಕಲ್ಲುಗಳನ್ನು ರಸ್ತೆ ಮಧ್ಯೆಯೇ ಬೀಳಿಸಿಕೊಂಡು ಹೋಗುತ್ತಿದ್ದಾರೆ. ಅದ್ದರಿಂದ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗುತ್ತಿದೆ. ರಸ್ತೆ ಅಪಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಸದ್ಯ ಬೆಳಗ್ಗೆ ಮತ್ತು ಸಂಜೆಯ ಕೆಲವು ಗಂಟೆಗಳ ಕಾಲ ಭಾರೀ ವಾಹನಗಳ ಸಂಚಾರವನ್ನು ನಗರದಲ್ಲಿ ನಿರ್ಬಂಧಿಸಲಾಗಿದೆ. ಇನ್ನು ಲಾರಿಗಳ ಮೇಲ್ಭಾಗದಲ್ಲಿ ಟಾರ್ಪಲ್ ಹಾಕಿಕೊಂಡು ಹೋಗದ ವಾಹನಗಳ ವಿರುದ್ಧ ಕ್ರಮಕ್ಕೆ ಸಾರಿಗೆ ಇಲಾಖೆ ಜತೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹಾಗೂ ಇತರೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net