

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕರೊನಾ ಲಾಕ್ಡೌನ್ನಲ್ಲಿ ಉದ್ಭವಿಸಿದ ಆರ್ಥಿಕ ಸಂದಿಗ್ಧ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡು ಹುಟ್ಟಿಕೊಂಡ ಚೀನಿ ಸಾಲದ ಆ್ಯಪ್ಗಳ ಹಾವಳಿಗೆ ಅಮಾಯಕರು ತತ್ತರಿಸಿದ್ದಾರೆ. ಬೆಂಗಳೂರು ನಗರ ಪೊಲೀಸರು, ಸೈಬರ್ ತಜ್ಞರ ಸಹಾಯದಿಂದ ಕಳೆದ 3 ತಿಂಗಳಲ್ಲಿ 108 ಸಾಲದ ಆ್ಯಪ್ ಕಂಪನಿಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ.
ಖಾಕಿ ಪಡೆಯ ಮುಂದುವರಿದ ಭಾಗವಾಗಿ ನಕಲಿ ಕಂಪನಿಗಳಿಗೆ ಸೇರಿದ ವಿವಿಧ ಬ್ಯಾಂಕ್ಗಳಲ್ಲಿ ತೆರೆದಿದ್ದ 120 ನಕಲಿ ಖಾತೆಗಳನ್ನು ಜಪ್ತಿ ಮಾಡಿ 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಸಾಲ ಮತ್ತು ಹೂಡಿಕೆ ಆ್ಯಪ್ಗಳ ವಿರುದ್ಧ ಕಾರ್ಯಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಆರ್ಥಿಕ ಸಂಕಷ್ಟದಲ್ಲಿ ಚೀನಾ ಉದ್ಯಮಿಗಳು, ಸಲೀಸಾಗಿ ಭಾರತಕ್ಕೆ ಬಂದು ಸ್ಥಳೀಯರ ಹೆಸರಿನಲ್ಲಿ ಹೂಡಿಕೆ ಮತ್ತು ಸಾಲದ ಆಪ್ಗಳ ಕಂಪನಿ, ಬ್ಯಾಂಕ್ ಖಾತೆ ತೆರೆದು ಗುತ್ತಿಗೆ ಕೊಟ್ಟಿದ್ದಾರೆ. ಇದೀಗ ಅಜ್ಞಾತ ಸ್ಥಳದಲ್ಲೇ ಕುಳಿತು ಸಂಪೂರ್ಣ ನಿಯಂತ್ರಣ ಮಾಡುತ್ತಿದ್ದಾರೆ.
ಮೊಬೈಲ್ಗಳಿಗೆ ಸಾಲದ ಆಪ್ಗಳ ಲಿಂಕ್ಗಳನ್ನು ಕಳುಹಿಸಿ ಕೇವಲ ಇನ್ಸ್ಟಾಲ್ ಮಾಡಿಕೊಂಡು ಒಟಿಪಿ ಕೊಟ್ಟರೇ 5 ಸಾವಿರದಿಂದ 1 ಲಕ್ಷ ರೂ. ವರೆಗೂ ಸಾಲ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಅಮಾಯಕರು ಸಂಕಷ್ಟದಲ್ಲಿ ಸಾಲ ಪಡೆದರೆ ಶೇ. 40 ರಿಂದ 60 ಬಡ್ಡಿ ವಸೂಲಿ ಮಾಡುವುದರ ಜತೆಗೆ ಹೆಚ್ಚಿನ ಹಣಕ್ಕೆ ಬ್ಲಾ್ಯಕ್ವೆುೕಲ್ ಮಾಡುತ್ತಿದ್ದಾರೆ. ಆಪ್ ಡೌನ್ಲೋಡ್ ಮಾಡಿಕೊಂಡ ಕೂಡಲೇ ಅವರ ಮೊಬೈಲ್ನಲ್ಲಿ ಇರುವ ಫೋಟೋ, ಮೊಬೈಲ್ ನಂಬರ್ಗಳನ್ನು ಕಳವು ಮಾಡುತ್ತಿದ್ದಾರೆ. ಸಾಲಗಾರ ಹೆಚ್ಚಿನ ಹಣ ಕೊಡದಿದ್ದರೇ ಅವರ ಪಾಲಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಸಾಲ ಮಾಡಿದ್ದಾರೆ. ಅಥವಾ ಅಶ್ಲೀಲವಾಗಿ ನಿಂದನೆ, ಎಡಿಟ್ ಮಾಡಿದ ವಿಡಿಯೋಗಳನ್ನು ಕಳುಹಿಸಿ ಸಾಲಗಾರ ಮರ್ಯಾದೆ ತೆರೆಯುತ್ತಿದ್ದಾರೆ. ಭಯದಲ್ಲಿ ಸಾಕಷ್ಟು ಜನರು ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ಕಟ್ಟಲು ಸಾಧ್ಯವಾಗದೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇತ್ತೀಚೆಗೆ ಮಲ್ಲತಹಳ್ಳಿಯ 43 ವರ್ಷದ ವ್ಯಕ್ತಿ, 6,160 ರೂ. ಸಾಲ ಪಡೆದಿದ್ದರು. ಫೆ.10ಕ್ಕೆ ಸಾಲ ಮರುಪಾವತಿ ನಿಗದಿತ ದಿನವಾದರೂ ಅದಕ್ಕೂ ಮೊದಲೇ ಸಾಲಗಾರರ ಮತ್ತು ಅವರ ಸಂಬಂಧಿಕರ ಮೊಬೈಲ್ಗೆ ಕರೆ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. ನಿಮ್ಮ ವ್ಯಕ್ತಿ, 5 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಮರ್ಯಾದೆ ತೆಗೆಯುತ್ತಿದ್ದು, ನೊಂದ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಇದೇ ರೀತಿ ಸಾಕಷ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ.
ನಿರುದ್ಯೋಗಿಗಳ ಹೆಸರಿನಲ್ಲಿ ನಕಲಿ ಕಂಪನಿ: ನಿರುದ್ಯೋಗಳಿಗೆ ವಾಟ್ಸ್ಆಪ್, ಟೆಲಿಗ್ರಾಂ ಸೇರಿ ಜಾಲತಾಣದಲ್ಲಿ ನೌಕರಿ ಆಫರ್ ಕೊಟ್ಟು ಅವರ ಕಡೆಯಿಂದ ದಾಖಲೆ ಸಂಗ್ರಹಿಸುತ್ತಾರೆ. ನೌಕರಿ ಸಿಕ್ಕಿರುವುದಾಗಿ ಹೇಳಿ ಅವರ ಹೆಸರಿನಲ್ಲೇ ನಕಲಿ ಕಂಪನಿ ತೆರೆದು ಅವರನ್ನೇ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕ ಇನ್ನಿತರ ಹುದ್ದೆಗಳಿಗೆ ನೇಮಿಸಿ ಬ್ಯಾಂಕ್ ಖಾತೆ ತೆರೆದು ಎಲ್ಲ ವಹಿವಾಟಿಗೆ ವೇದಿಕೆ ಸಜ್ಜು ಮಾಡಿದ್ದರು. ಇನ್ನೂ ಕೆಲವು ಪ್ರಕರಣಗಳಲ್ಲಿ ಕಾಲ್ ಸೆಂಟರ್ ಕಚೇರಿ ತೆರೆದು ಅವರಿಗೆ ಸ್ಯಾಲರಿ ಬ್ಯಾಂಕ್ ಖಾತೆ ತೆರೆಯಬೇಕೆಂದು ಹೇಳಿ ಅವರ ಕಡೆಯಿಂದ ದಾಖಲೆ ಪಡೆದು ಬ್ಯಾಂಕ್ ಖಾತೆ ತೆರೆದು ಅದೇ ಖಾತೆಗೆ ವಂಚಿಸಿದ್ದ ಹಣ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡುತ್ತಿದ್ದಾರೆ. ಒಟ್ಟಾರೆ ಕಿಂಗ್ಪಿನ್ಗಳ ಮಾಹಿತಿ ಸಿಗದಂತೆ ಮಾಡುತ್ತಿದ್ದಾರೆ.
ಸಾಲದ ಆಪ್ಗಳು: ಸ್ಕೈಲೈನ್ ಟೆಕ್ನಾಲಾಜಿ ಪ್ರೖೆವೆಟ್ ಲಿಮಿಟೆಡ್ ಕಂಪನಿ ನಿರ್ದೇಶಕರು ಅಮಾಯಕರಿಗೆ ವಂಚನೆ ಮಾಡಲು ಕ್ವಾಲೀಟಿ ಕ್ಯಾಷ್, ಕುಬೇರನ್ ರೂಪೀಸ್, ಓಸೀನ್ ರುಪೀಸ್ವು, ಲೈಫ್ ವ್ಯಾಲೇಟ್, ರಾಯಲ್ ಕ್ಯಾಷ್, ಎಲಿಫ್ಯಾಂಟ್ ಕ್ಯಾಷ್, ದುಟ್ಟು ರುಪೀ, ರೈಸ್ ವ್ಯಾಲೇಟ್, ಬಾಕ್ಸ್ ಕ್ಯಾಷ್, ಸಿಸಿ ರುಪೀ, ಮಲೋ ಲೋನ್, ಸಿಂಗಲ್ ರುಪೀ, ಟೈಮ್ೕ ಲೋನ್, ರಬ್ಬಿಟ್ ಲೋನ್ ಎಂಬ ಆಪ್ ತೆರೆದಿದ್ದಾರೆ. ಇದೇ ರೀತಿ ಸಾವಿರಾರು ಆಪ್ಗಳನ್ನು ತೆರೆದು ಲಿಂಕ್ ಮೂಲಕ ಕಳುಹಿಸುತ್ತಾರೆ. ಇದಕ್ಕೆ ಅಮಾಯಕರು ಬಲಿಯಾಗಬಾರದು ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.