ಕೂಲಿಂಗ್​ ಗ್ಲಾಸ್​ ಧರಿಸಿ ಬಳ್ಳಾರಿ ಜೈಲಿಗೆ ದಾಸ ಎಂಟ್ರಿ; ದರ್ಶನ್​ರನ್ನು ಶಿಫ್ಟ್​ ಮಾಡಿದ ಅಧಿಕಾರಿಗಳಿಗೆ ಎದುರಾಯ್ತು ಸಂಕಷ್ಟ

darshan
Published on

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಜೊತೆಗೆ ಅಧಿಕಾರಿಗಳಿಗೂ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಈ ಹಿಂದೆ ಜೈಲಿನಲ್ಲಿ ದರ್ಶನ್​ ರಾಜಾತಿಥ್ಯ ಪಡೆದಿದ್ದಕ್ಕೆ ಏಳು ಮಂದಿ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್​ ಮಾಡಿತ್ತು. ಇದೀಗ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ.

ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿಯ ಸೆಂಟ್ರಲ್​ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಬಳ್ಳಾರಿ ಜೈಲಿಗೆ ಕರೆತಂದ ಸಂದರ್ಭದಲ್ಲಿ ಆರೋಪಿ‌ ಕೂಲಿಂಗ್ ಗ್ಲಾಸ್ ಧರಿಸಲು‌ ಅವಕಾಶ ಕೊಟ್ಟ ಅಧಿಕಾರಿ‌‌‌ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರವಲಯ ಡಿಐಜಿ ಟಿ.ಪಿ.ಶೇಷ ಅವರು ಡಿಜಿಪಿ ಮಾಲಿನಿ ಅವರಿಗೆ ಪತ್ರ ಬರೆದಿದ್ದಾರೆ.

ಘಟನೆಯ ಹಿನ್ನೆಲೆ?

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಸೆಂಟ್ರಲ್​ ಜೈಲಿಗೆ ನಟ ದರ್ಶನ್​ರನ್ನು ಕರೆತಂದಾಗ ಅವರು ಕೂಲಿಂಗ್​ ಗ್ಲಾಸ್​ ಧರಿಸಿದ್ದರು. ಇದು ಜೈಲಿನ ನಿಯಮಗಳಿಗೆ ವಿರುದ್ಧವಾಗಿದ್ದು, ಈಗಾಗಲೇ ಮಾಧ್ಯಮಗಳಲ್ಲಿ ಇದರ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದು, ಇದರಿಂದ‌ ಇಲಾಖೆಯ‌ ಘನತೆಗೆ ಧಕ್ಕೆ ಬಂದಿದೆ. ದರ್ಶನ್ ಒಬ್ಬ ಸೆಲೆಬ್ರಿಟಿ‌ ಆಗಿದ್ದರಿಂದ ಈ ಪ್ರಕರಣದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಈಗಾಗಲೇ ಆರೋಪಿ ಕುರಿತಾಗಿ ಸಣ್ಣ ಸಣ್ಣ ತಪ್ಪುಗಳು ಕೂಡ ದೊಡ್ಡ ಸುದ್ದಿಗಳಾಗುತ್ತಿವೆ. ಯಾವುದೇ ಅಣ್ಣ‌ ತಪ್ಪೂ ಆಗದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ಬೆಂಗಾವಲು ಅಧಿಕಾರಿ, ಸಿಬ್ಬಂದಿ‌ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಐಜಿ ಟಿ.ಪಿ.ಶೇಷ ಅವರು ಡಿಜಿಪಿ ಮಾಲಿನಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

DIG letter
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net