

ಬೆಂಗಳೂರು: ಶಾಸಕರನ್ನು ಅಮಾನತು ಮಾಡುವ ಧೈರ್ಯ ಹಿಂದಿನ ಸ್ಪೀಕರ್‌ಗಳಿಗೆ ಇರಲಿಲ್ಲ, ನನಗೆ ಧೈರ್ಯವಿದ್ದುದರಿಂದ ಕ್ರಮ ಕೈಗೊಂಡಿದ್ದೇನೆ(I took action because I had the courage) ಎಂಬ ಯು.ಟಿ.ಖಾದರ್ ಹೇಳಿಕೆಗೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ(K B Koliwada) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಪ್ರತಿಪಕ್ಷದ ಸದಸ್ಯರ ಅಶಿಸ್ತಿನ ವರ್ತನೆಗಾಗಿ 18 ಶಾಸಕರನ್ನು ಸ್ಪೀಕರ್ 6 ತಿಂಗಳು ಅಮಾನತು ಮಾಡಿರುವುದು ಸ್ವಾಗತಾರ್ಹ. ಆದರೆ, ಹಿಂದಿನ ಸ್ಪೀಕರ್‌ಗಳಿಗೆ ಧೈರ್ಯವಿರಲಿಲ್ಲ ಎಂದು ಹೇಳಿರುವುದು ಸರಿಯಲ್ಲ. ಬಹಳಷ್ಟು ನುರಿತ ಹಾಗೂ ಅನುಭವಸ್ಥ ರಾಜಕಾರಣಿಗಳು ಸಭಾಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲ ಹಿಂದಿನ ಸಭಾಧ್ಯಕ್ಷರನ್ನು ಸಾರಾಸಗಟ ಅಧೈರ್ಯಿಗಳು ಎನ್ನುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ.
ಸಭಾಧ್ಯಕ್ಷರಾಗಿ ನಿಯಮಾನುಸಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಧೈರ್ಯ ಇದೆ ಎಂದು ಮಾತ್ರಕ್ಕೆ ಇಷ್ಟ ಬಂದ ಹಾಗೆ ನಿರ್ಧಾರ ತೆಗೆದುಕೊಳ್ಳಲು ಆಗುತ್ತದೆಯೆ? ಶಾಸಕರ ಮೇಲೆ ಕ್ರಮ ಕೈಗೊಳ್ಳುವುದು ವಿಧಾನಸಭಾ ಅಧ್ಯಕ್ಷರ ಧೈರ್ಯದ ಮೇಲೆ ಅವಲಂಬಿತವಾಗಿರುವುದಿಲ್ಲ ಕ್ರಮ ಕೈಗೊಳ್ಳುವುದು ಸದನದಲ್ಲಿ ನಡೆಯುವ ಅಶಿಸ್ತಿನ ಗಾಂಭೀರ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಅವಧಿಯಲ್ಲಿ ಅಂತಹ ಗಂಭೀರವಾದ ಅಶಿಸ್ತಿನ ನಡವಳಿಕೆಗಳು ಸಂಭವಿಸಿರುವುದಿಲ್ಲ. ಸಂಭವಿಸತಕ್ಕ ನಡವಳಿಕೆಗಳಿಗೆ ನಾನು ಎಂದೂ ಅವಕಾಶ ಕೊಟ್ಟಿರಲಿಲ್ಲ. ಸ್ಪೀಕರ್ ಅವರು ವಿರೋಧ ಪಕ್ಷದವರಿಗೆ ಅವರ ಅಭಿಪ್ರಾಯ ಹೇಳಲು ಹೆಚ್ಚು ಅವಕಾಶ ಕೊಡುವುದು ಸೂಕ್ತ. ವಿರೋಧ ಪಕ್ಷದವರಿಗೆ ಅವರದ್ದೇ ಆದ ಹೇಳಿಕೆಗಳು ಇರುತ್ತವೆ. ಸರ್ಕಾರಕ್ಕೆ ತನ್ನದೇ ಆದ ಹಾದಿ ಇರುತ್ತದೆ ಎಂದು ಕೆ.ಬಿ.ಕೋಳಿವಾಡ ಪ್ರಕಟಣೆಯಲ್ಲಿ ಹೇಳಿದ್ದಾರೆ.