

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಮತ್ತು ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ದುರ್ಬಳಕೆಯಾಗಿದೆ. ಚುನಾವಣಾ ಅಕ್ರಮ ಪ್ರಕರಣ ದಾಖಲಿಸಿ ಎರಡು ಕ್ಷೇತ್ರಗಳ ಲಿತಾಂಶ ತಡೆಹಿಡಿಯಬೇಕು ಎಂದು ಬಿಜೆಪಿ ಮುಖಂಡರ ನಿಯೋಗ ಒತ್ತಾಯಿಸಿದೆ.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದ ನಿಯೋಗ ರಾಜಭವನಕ್ಕೆ ಶುಕ್ರವಾರ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದೆ.
ನಂತರ ಸುದ್ದಿಗಾರರೊಂದಿಗೆ ಅರವಿಂದ ಲಿಂಬಾವಳಿ ಮಾತನಾಡಿ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ಮಾಡಿದ್ದರ ಬಗ್ಗೆ ದಾಖಲೆ ಸಹಿತ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ.
ಚುನಾವಣೆಗಿಂತ ಮೊದಲೇ ಅರುಣ್ ಹಿರೇಹಾಳ್ ಸಲ್ಲಿಸಿದ ದೂರಿಗೆ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿದ ಕಾರಣ ರಾಜ್ಯಪಾಲರ ಮನವಿ ಸಲ್ಲಿಸಿ, ಶಾಸಕರಾದ ಬಿ.ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಶಾಸಕತ್ವ ರದ್ದು, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಲಿತಾಂಶ ತಡೆ ಹಿಡಿಯಲು ಕೋರಿದ್ದೇವೆ ಎಂದರು.
ಇದು ಪ್ರತ್ಯೇಕ ಹೋರಾಟವಲ್ಲ, ಪಾದಯಾತ್ರೆಗೆ ಒಪ್ಪಿಗೆ ನೀಡಿದ್ದಾರೆ. ಇದೇ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಇನ್ನೂ ಯಾರೆಲ್ಲ ಬರುತ್ತಾರೋ ಅವರನ್ನೆಲ್ಲ ಸೇರಿಸಿಕೊಂಡು ಹೋರಾಟ ಮಾಡಲಿದ್ದು, ಕಾನೂನು ಹೋರಾಟವೂ ನಡೆಯಲಿದೆ ಎಂದು ಲಿಂಬಾವಳಿ ತಿಳಿಸಿದರು.
ನಮ್ಮಲ್ಲಿ ಯಾವುದೇ ಗೊಂದಲ, ಭಿನ್ನಮತವಿಲ್ಲ. ನಿನ್ನೆಯ ಸಮನ್ವಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗಿದ್ದೇವೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಸ್ಪಷ್ಟಪಡಿಸಿದರು.
ಬಿಜೆಪಿ-ಆರ್‌ಎಸ್‌ಎಸ್ ಸಮನ್ವಯ ಬೈಠಕ್ ಯಶಸ್ವಿಯಾಯಿತು ಎಂದು ಬಿಂಬಿಸಿದ ಮರು ದಿನವೇ ಬಿಜೆಪಿಯ ಬಣವೊಂದು ರಾಜ್ಯಪಾಲರಿಗೆ ಭೇಟಿಯಾಗಿ ಮನವಿ ಸಲ್ಲಿಸಿದೆ. ಆರ್‌ಎಸ್‌ಎಸ್ ಮಧ್ಯೆ ಪ್ರವೇಶದಿಂದ ಬಣಗಾರಿಕೆ ಶಮನವಾಗಿ ಒಮ್ಮತ ಮೂಡಿತೆ ? ಎಂಬ ಪ್ರಶ್ನೆ ಹುಟ್ಟಿಹಾಕಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ಟೀಕೆ, ಸಮನ್ವಯ ಬೈಠಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಈ ನಿಯೋಗದಲ್ಲಿದ್ದರು ಎನ್ನುವುದು ಗಮನಾರ್ಹ.
ಈ ಮಧ್ಯೆ ಸಮನ್ವಯ ಬೈಠಕ್ ಬಳಿಕ ಅತೃಪ್ತರ ಬಣದಲ್ಲಿ ಲವಲವಿಕೆ ಮೂಡಿದೆ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇವೆ ಎಂದು ತೋರಿಸಿಕೊಳ್ಳಲು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.