ಮುಖ್ಯಮಂತ್ರಿ-ಸಚಿವರ ವಿರುದ್ಧವೂ ಕ್ರಮ; ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

BSY
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನಿತರ ಸಚಿವರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ದೂರುಗಳನ್ನು ಸರ್ಕಾರ ಆರಂಭಿಸಿರುವ ‘ಕುಂದು ಕೊರತೆ ಪರಿಹಾರ ಘಟಕ’ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.

ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಲು ಕುಂದುಕೊರತೆ ಪರಿಹಾರ ಘಟಕ ಸ್ಥಾಪಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಎರಡನೇ ಹಂತದ ಮೆಟ್ರೋ ಮಾರ್ಗದ ಪರಿಶೀಲನೆ ವೇಳೆ ಸಿಎಂ ಯಡಿಯೂರಪ್ಪ, ಸಚಿವರಾದ ಆರ್. ಅಶೋಕ್, ಸೋಮಣ್ಣ, ಬೆಳಗಾವಿಯಲ್ಲಿ ಹೋಮ ನಡೆಸಿದ್ದ ಶಾಸಕ ಅಭಯ್ ಪಾಟೀಲ್ ಹಾಗೂ ಹೊಸಕೋಟೆಯಲ್ಲಿ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸಿದ್ದ ಸಚಿವ ಎಂಟಿಬಿ ನಾಗರಾಜ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಫೋಟೋ ಸಹಿತ ಮೆಮೋ ಸಲ್ಲಿಸಿದರು.

ಪರಿಹಾರ ಘಟಕಕ್ಕೆ ದೂರು ನೀಡಿ: ರಾಜಕಾರಣಿಗಳಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದ ನಿಮ್ಮ ಎಲ್ಲ ದೂರುಗಳನ್ನು ಸರ್ಕಾರ ಆರಂಭಿಸಿರುವ ಕುಂದು ಕೊರತೆ ಪರಿಹಾರ ಘಟಕಕ್ಕೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ಪೀಠ, ದೂರುಗಳ ಸಂಬಂಧ ಕ್ರಮ ಕೈಗೊಳ್ಳಲು ಘಟಕ ವಿಫಲವಾದರೆ, ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.

ಕಾಲಾವಕಾಶ ಕೇಳಿದ ಸರ್ಕಾರ: ಸರ್ಕಾರದ ಪರ ವಕೀಲರು, ಲಾಕ್​ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಹಾಗೂ ಕಳೆದ ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ, ಮುಂದಿನ ವಿಚಾರಣೆ ವೇಳೆ ವರದಿ ಹಾಗೂ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net